ನಿದ್ದೆ ಮಾಡಿದ್ದ ವೇಳೆ ಕುತ್ತಿಗೆಗೆ ಕತ್ತಿಯಿಂದ ಕಡಿದು ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಕೊಲೆ

ಹೈದರಾಬಾದ್: ಪ್ರೀತ್ಸೇ.. ಪ್ರೀತ್ಸೇ ಅಂತ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಬೆನ್ನು ಬಿದ್ದ ಪಾಗಲ್ ಪ್ರೇಮಿಯೊಬ್ಬ ಆಕೆಯ ಮೇಲೆ ಕತ್ತಿಯಿಂದ ದಾಳಿ ಮಾಡಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡ ನಗರದಲ್ಲಿ ನಡೆದಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ದಿವ್ಯ ತೇಜಸ್ವಿನಿ (20) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಪೊಲೀಸರು ನೀಡಿರುವ ಮಾಹಿತಿ ಅನ್ವಯ, ಕ್ರಿಸ್ತು ರಾಜಪುರಂ ಪ್ರದೇಶದ ನಿವಾಸಿಯಾಗಿರುವ ದಿವ್ಯ ತೇಜಸ್ವಿನಿ ಎಂಜಿನಿಯರಿಂಗ್ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದಾಳೆ. ಸ್ಥಳೀಯವಾಗಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಆರೋಪಿ ನಾಗೇಂದ್ರ ಬಾಬು ಅಲಿಯಾಸ್ ಚಿನ್ನ ಸ್ವಾಮಿ (24) ಕೆಲ ಸಮಯದಿಂದ ಪ್ರೀತಿ ಮಾಡುವಂತೆ ಆಕೆಯ ಹಿಂದೆ ಬಿದ್ದಿದ್ದ.

ಆದರೆ ಯುವತಿ ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ವಿದ್ಯಾರ್ಥಿನಿ ವಿರುದ್ಧ ಕೋಪಗೊಂಡ ಸ್ವಾಮಿ ಗುರುವಾರ ಬೆಳಗ್ಗಿನ ಜಾವ ಯುವತಿಯ ಮನೆಗೆ ತೆರಳಿ ಆಕೆ ನಿದ್ರೆ ಮಾಡುತ್ತಿದ್ದ ಸಂದರ್ಭದಲ್ಲಿ ಕತ್ತಿಯಿಂದ ಕುತ್ತಿಗೆ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಕೊಠಡಿಯಿಂದ ಕಿರುಚಿದ ಶಬ್ದ ಕೇಳಿ ಬಂದ ಕಾರಣ ಕುಟುಂಬಸ್ಥರು ಎಚ್ಚರಗೊಂಡು ಆಕೆಯ ರಕ್ಷಣೆಗೆ ಮುಂದಾಗಿದ್ದರು.

STUDENT-MUERDER

ಘಟನೆಯಲ್ಲಿ ದಿವ್ಯ ತೇಜಸ್ವಿನಿ ಕುತ್ತಿಗೆ ಭಾಗದಲ್ಲಿ ತೀವ್ರ ಗಾಯವಾಗಿದ್ದ ಕಾರಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗುಂಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.

ತೇಜಸ್ವಿನಿ ಮೇಲೆ ಹಲ್ಲೆ ಮಾಡಿದ ಬಳಿಕ ಅದೇ ಕತ್ತಿಯಿಂದ ಆರೋಪಿ ನಾಗೇಂದ್ರ ಬಾಬು ಕೂಡ ಕುತ್ತಿಗೆ, ಹೊಟ್ಟೆ, ಮಣಿಕಟ್ಟು ಕಟ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆರೋಪಿ ಕುಟುಂಬಸ್ಥರಿಗೆ ಪರಿಚಯ ಹೊಂದಿದ್ದ. ಘಟನೆ ನಡೆದ ಬೆಳಗ್ಗೆ ಕೂಡ ಆತ ಯುವತಿಯ ಸಹೋದರನೊಂದಿಗೆ ಸಹಜವಾಗಿಯೇ ಮಾತನಾಡಿದ್ದ. ಸದ್ಯ ಆರೋಪಿ ಗುಂಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕಳೆದ ಒಂದು ವಾರದ ಅವಧಿಯಲ್ಲಿ ವಿಜಯವಾಡ ಪ್ರದೇಶದಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ಪ್ರೀತಿ ನಿರಾಕರಿಸಿದಕ್ಕೆ ನರ್ಸ್ ಅನ್ನು ಪ್ರೇಮಿಯೊಬ್ಬ ಜೀವಂತವಾಗಿಯೇ ಸುಟ್ಟು ಹಾಕಿದ್ದ. ಘಟನೆ ವೇಳೆ ಆಕೆ ಆರೋಪಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಕಾರಣ ಆತ ಅದೇ ಬೆಂಕಿಗೆ ಬಲಿಯಾಗಿದ್ದ.

ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ...