ಉದ್ಯೋಗವನ್ನು ಅರಸಿ ದೇಶ ವಿದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾದ ಸನ್ನಿವೇಶದಲ್ಲಿ ವಿದೇಶದಲ್ಲಿ ದೊರೆತ ಉನ್ನತ ಹುದ್ದೆಗಳನ್ನು ತೊರೆದು , ಇಲ್ಲವೇ ಉನ್ನತ ಶಿಕ್ಷಣ ಪದವಿ ಪಡೆದುಕೊಂಡು ಉತ್ತಮ ಕೆಲಸ ಮಾಡಬೇಕಾದ ಸಾಕಷ್ಟು ಯುವಕ ಯುವತಿಯರು ತಮ್ಮ ಕೆಲಸಗಳನ್ನು ತೊರೆದು ಹಳ್ಳಿಗೆ ಬಂದು ಕೃಷಿಯನ್ನು ಮಾಡಿ ಅಭಿವೃದ್ಧಿ ಗೊಳಿಸುತ್ತಾ ಹೆಚ್ಚೆಚ್ಚು ಖುಷಿ ಕಂಡುಕೊಂಡು ಮತ್ತೆ ಆಧುನಿಕ ಕೃಷಿಯ ಕಡೆ ಒಲವು ತೋರುತ್ತಾ ಇದ್ದಾರೆ. ಇದೇ ರೀತಿಯಲ್ಲಿ ಇಂಜಿನಿಯರಿಂಗ್ ಪದವೀಧರೆ ಒಬ್ಬಳು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾಳೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಗ್ರಾಮಿಣ ಪ್ರದೇಶದ ಯುವಕರು ಉದ್ಯೋಗ ಅರಿಸಿಕೊಂಡು ಪಟ್ಟಣ ಕಡೆ ಮುಖಮಾಡುತ್ತಾರೆ. ಇತ್ತಿಚೀನ ದಿನಗಳಲ್ಲಿ ಯುವಕರು ಕೃಷಿ ಕ್ಷೇತ್ರ ಅಂದರೆ ಮೂಗು ಮುರಿಯುವವರೇ ಹೆಚ್ಚು. ಜನ ಗ್ರಾಮಿಣ ಪ್ರದೇಶದಿಂದ ನಗರೀಕಣದತ್ತ ಜನ ಮುಖಮಾಡಿದೆ. ಇಂತಹ ಸಂದರ್ಭದಲ್ಲಿ ಐಟಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದ ಯುವತಿ ಕೃಷಿ ಮಾಡಿ ಮಾದರಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ‘ಆಯಿಲ್ ಸಿಟಿ’ ಎಂದು ಹೆಸರು ಪಡೆದಿರುವ ಚಳ್ಳಕೆರೆ ತಾಲೂಕಿನ ತಳುಕು ಹೋಬಳಿಯ ದೊಣ್ಣೆಹಳ್ಳಿ ಗ್ರಾಮದ ಇಂಜಿನಿಯರಿಂಗ್ ಪದವೀಧರೆ ಜೆ. ರೋಜಾ ರೆಡ್ಡಿ ಇಂಜಿನಿಯರಿಂಗ್ ಓದಿದ್ದರೂ ಐಟಿ ಕೆಲಸಕ್ಕೆ ಗುಡ್ ಬೈ ಹೇಳಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

krushi-success

ಕೃಷಿ ಮೂಲಕ ಬದುಕು ಕಟ್ಟಿಕೊಂಡ ರೋಜಾ ರೆಡ್ಡಿ ತಂದೆ ಲಕ್ಷಣಮೂರ್ತಿ ಮಗಳನ್ನು ಇಂಜಿನಿಯರಿಂಗ್ ವ್ಯಾಸಂಗ ಮಾಡಲು ಕಳಿಸಿದರು. 2018ರಲ್ಲಿ ತುಮಕೂರಿನ ಆಚಾರ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ ಪಡೆದ ರೋಜಾ ಎರಡು ವರ್ಷಗಳ ಕಾಲ ಬೆಂಗಳೂರಿನ ಐಬಿಎಂನಲ್ಲಿ ಕೆಲಸ ಮಾಡಿದ್ದಾರೆ. ಕೋವಿಡ್ ಕಾಲದಲ್ಲಿ ರೋಜಾ ಕೆಲಸಕ್ಕೆ ಅಡ್ಡಿ ಉಂಟಾಯಿತು. ಲಾಕ್‌ಡೌನ್ ಸಮಯದಲ್ಲಿ ರೋಜಾ ಉದ್ಯೋಗ ಬಿಟ್ಟು ತವರಿಗೆ ವಾಪಸ್ ಬರಬೇಕಾಯಿತು. ತಂದೆ ಕೃಷಿ ಚಟುವಟಿಕೆಯಲ್ಲಿ ಸಾಕಷ್ಟು ಕಷ್ಟಪಡುತ್ತಿದ್ದರು. ಸಿಕ್ಕ ಸಮಯವನ್ನು ಬಳಸಿಕೊಂಡ ರೋಜಾ ತಂದೆಗೆ ಕೃಷಿ ಚಟುವಟಿಕೆಯಲ್ಲಿ ಸಹಾಯ ಮಾಡುತ್ತಿದ್ದರು. ಬಳಿಕ ಕೆಲಸ ಬಿಟ್ಟು ಭೂತಾಯಿಗೆ ಕೈ ಮುಗಿದು ಕೃಷಿ ಕಾರ್ಯಕ್ಕೆ ಕೈ ಹಾಕಿ ಹಣ ಸಂಪಾದನೆ ಮಾಡುತ್ತಿದ್ದಾರೆ.

ಮಾಧ್ಯಮದ ಜೊತೆ ಮತನಾಡಿದ ರೋಜಾ ಅವರು 6 ಎಕರೆ ಜಮೀನಿನಲ್ಲಿ 3 ಎಕರೆಯಂತೆ ಎರಡು ಭಾಗವಾಗಿ ಮಾಡಿದ್ದಾರೆ. ಮೂರು ಎಕರೆಯಲ್ಲಿ ತರಕಾರಿ ಬೆಳೆದು ಮಾರಾಟ ಮಾಡುತ್ತಿದ್ದಾರೆ. ಈ ಮೂರು ಎಕರೆಯಲ್ಲಿ ತರಕಾರಿ ಮುಗಿದ ಮೇಲೆ ಉಳಿದ ಮೂರು ಎಕರೆಯಲ್ಲಿ ಅದೇ ತರಕಾರಿ ಬೀಜ ಮತ್ತು ಸಸಿಗಳನ್ನು ನಾಟಿ ಮಾಡಿ ತರಕಾರಿ ಬೆಳೆಯುತ್ತಾರೆ. ಈ ಮೂಲಕ ವರ್ಷ ಪೂರ್ತಿ ತರಕಾರಿ ಸಿಗುವಂತೆ ಮಾಡಿದ್ದಾರೆ. 8 ತಿಂಗಳ ಅವಧಿಯಲ್ಲಿ ತರಕಾರಿ ಬೆಳೆಯಲು 1 ಲಕ್ಷ ರೂಪಾಯಿ ಖರ್ಚು ಮಾಡಿರುವ ಇವರು ಮೂಲಂಗಿ, ಕ್ಯಾರೆಟ್, ಹೀರೆಕಾಯಿ, ಟೊಮೋಟೊ, ಬದನೆಕಾಯಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪಲಾಕ್, ಮೆಂತೆ ಸೊಪ್ಪು ಸೇರಿದಂತೆ ಸುಮಾರು 25 ಬಗೆಯ ತರಕಾರಿ ಬೆಳೆದಿದ್ದಾರೆ. ಉತ್ತಮ ಇಳುವರಿಯನ್ನು ಪಡೆದಿದ್ದು, ಚಳ್ಳಕೆರೆ ನಗರದಲ್ಲಿ ಮೊಬೈಲ್ ಆಪ್ ಮೂಲಕ ಮಾರಾಟ ಮಾಡಿ 3 ಲಕ್ಷ ರೂ. ಆದಾಯಗಳಿಸಿದ್ದಾರೆ. ಚಳ್ಳಕೆರೆ ನಗರದಲ್ಲಿ ಭಾರತೀಯ ಕಿಸಾನ್ ರೈತ ಸಂಘ ಹಾಗೂ ಗೋವು ಉತ್ಪಾದಕ ಬಳಕೆದಾರ ರೈತ ಸಂಘಗಳಿಂದ ಸಾವಯವ ಬೆಳೆ ಬೆಳೆಯುವ ರೈತರನ್ನು ಒಗ್ಗೂಡಿಸಿಕೊಂಡು ಸಾವಯವ ಸಂತೆಯನ್ನು ವಾಲ್ಮೀಕಿ ನಗರದ ನವಚೈತನ್ಯ ಶಾಲೆಯ ಶ್ರೀ ಮಲ್ಲಿಕಾರ್ಜನಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿ ಬುಧವಾರ ಸಂಜೆ 4 ರಿಂದ 7 ಗಂಟೆಯವರೆಗೆ ನಡೆಸುತ್ತಾರೆ.

krushi-success

ರೈತರಿಂದ ಗ್ರಾಹಕರಿಗೆ ನೇರವಾಗಿ ತರಕಾರಿ ಮಾರಾಟ ಮಾಡುತ್ತಾರೆ. ಐಟಿ ಉದ್ಯೋಗದಲ್ಲಿ ಒತ್ತಡ, ಹೆಚ್ಚು ಕೆಲಸ ಇರುತ್ತದೆ, ನೆಮ್ಮದಿ ಇರುವುದಿಲ್ಲ. ಆದರೆ, ಕೃಷಿ ಕ್ಷೇತ್ರದಲ್ಲಿ ನೆಮ್ಮದಿ ಇದೆ. ಭೂಮಿಗೆ ರಾಸಾಯನಿಕಗಳನ್ನು ಹಾಕಿದರೆ ಭೂಮಿಯು ಫಲವತ್ತತೆ ಕಳೆದುಕೊಳ್ಳುತ್ತದೆ. ಸಾವಯವ ಕೃಷಿಯಿಂದ ಭೂಮಿಯನ್ನು ಸಂರಕ್ಷಣೆ ಮಾಡುತ್ತಿದ್ದೇನೆ. ಪ್ರತಿಯೊಬ್ಬ ರೈತನಿಗೂ ಕಷ್ಟ ಇರುತ್ತದೆ. ಯುವಕರು ಬಂದು ಅವರಿಗೆ ಸಹಾಯ ಮಾಡಬೇಕು. ನಾವು ಕೂಡ ಕೃಷಿಯಲ್ಲಿ ತೊಡಗಿಕೊಳ್ಳಬೇಕು ಎಂದು ರೋಜಾ ರೆಡ್ಡಿ ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ರೈತರ ಮಕ್ಕಳು ಕೃಷಿ ಬಿಟ್ಟು ಉದ್ಯೋಗವನ್ನು ಅರಿಸಿ ಬೆಂಗಳೂರು ಕಡೆ ಹೋಗುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ತುಂಬಾ ಜನ ಬೆಂಗಳೂರು ಬಿಟ್ಟು ವಾಪಸ್ ಬಂದರು. ಇಲ್ಲಿ ಏನು ಸಿಗುತ್ತಿಲ್ಲ, ಏನು ಮಾಡೋಕೆ ಆಗುತ್ತಿಲ್ಲ ಅಂದುಕೊಂಡರು. ಈಗಿನ ಯುವಕರು ಕೃಷಿಯಲ್ಲಿ ಸಾಧನೆಯನ್ನು ಮಾಡಿ ತೋರಿಸಬೇಕು. ಕೃಷಿಯಲ್ಲಿಯೂ ಸಂಪಾದನೆ ಮಾಡಬಹುದು. ಪ್ರತಿಯೊಬ್ಬ ಮಕ್ಕಳು ಸಹ ಕೃಷಿ ಮಾಡಲು ಪೋಷಕರಿಗೆ ಸಹಾಯ ಮಾಡಬೇಕು ಎಂದು ರೋಜಾ ಅಭಿಪ್ರಾಯಪಟ್ಟಿದ್ದಾರೆ.

……….
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •