ಕೊರೊನಾ ೨ನೇ ಅಲೆ ರಾಜ್ಯದಲ್ಲಿ ಸಾಕಷ್ಟು ಸಂಕಷ್ಟವನ್ನು ತಂದೊಡ್ಡಿದೆ. ಅದರಲ್ಲೂ ಚಿತ್ರರಂಗದಲ್ಲಿ ಕೆಲಸ ಮಾಡುವ ಅದೆಷ್ಟೋ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಆ ದಿನದ ಚಿತ್ರೀಕರಣ ನಡೆದರೆ ಅಂದು ಅವರಿಗೆ ದುಡ್ಡು ಸಿಗುತ್ತದೆ. ಇಲ್ಲವಾದರೆ ಅವರು ಹಣವಿಲ್ಲ ಎಂಬ ಸ್ಥಿತಿ ಇದೆ. ಪ್ರಸ್ತುತ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಿರುವುದರಿಂದ ಸಿನಿಮಾ, ಕಿರುತೆರೆಯ ಚಿತ್ರೀಕರಣ ನಿಂತು ಹೋಗಿದೆ. ಹಾಗಾಗಿ ಸಹಜವಾಗಿ ಸಹಕಲಾವಿದರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

 

ಹೀಗೆ ಸಂಕಷ್ಟದಲ್ಲಿ ಸಿಲುಕಿರುವ ಸಹಕಲಾವಿದರ ನೆರವಿಗೆ ಹಿರಿಯ ಕಲಾವಿದೆ ಲೀಲಾವತಿ ಅವರು ನೆರವಿಗೆ ನಿಂತಿದ್ದಾರೆ. ಅದೆಷ್ಟೋ ದೊಡ್ಡ ಸ್ಟಾರ್ ನಟರು ಊರ ಉಸಾಬರಿ ನಮಗ್ಯಾಕೆ ಎಂದು ಬೆಚ್ಚಗೆ ಮನೆಯಲ್ಲಿ ಕುಳಿತಿರುವ ಹೊತ್ತಿನಲ್ಲಿ ಹಿರಿಯ ನಟಿ ಲೀಲಾವತಿ ಅವರು ಮಾದರಿಯಾಗಿದ್ದಾರೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು, ತಮ್ಮ ಸಂಪಾದನೆಯ ಒಂದಷ್ಟು ಭಾಗವನ್ನು ಸಮಾಜಕ್ಕೆ ಕೊಡುತ್ತಾ ಬಂದಿದ್ದಾರೆ.

 

 

ಆ ಮೂಲಕ ಯುವ ಜನಾಂಗಕ್ಕೆ ಅವರ ಕಾರ್ಯ ಮಾದರಿಯಾಗಿದೆ. ಸಂಪಾದನೆ ಮಾಡಿದ ಹಣವನ್ನೆಲ್ಲಾ ನಾವೇ ಇಟ್ಟುಕೊಳ್ಳುವುದಲ್ಲ. ಬದಲಾಗಿ ಅದರ ಒಂದು ಭಾಗವನ್ನಾದರೂ ಜನರಿಗೆ ಸಹಾಯ ಮಾಡುವ ಮೂಲಕ ಹಂಚಿಕೊಂಡು ತಿನ್ನುವ ಗುಣವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಾವು ಜೀವನದಲ್ಲಿ ಸುಖವಾಗಿರಲು ಸಾಧ್ಯವಾಗುತ್ತದೆ.ಕಳೆದ ವರ್ಷ ಕೂಡ ಲಾಕ್ ಡೌನ್ ಆದಾಗ ಕೂಡ ಅವರು ಸಹ ಕಲಾವಿದರಿಗೆ ಸಹಾಯ ಮಾಡಿದ್ದರು. ಈ ಬಾರಿಯೂ ಕೂಡ ಬೆಂಗಳೂರಿನ ಸುಮನಹಳ್ಳಿಯ ಸುಮಾರು ೨೦೦ ಸಹ ಕಲಾವಿದರಿಗೆ ದಿನಸಿ ಸಾಮಾಗ್ರಿ ಕಿಟ್ ಅನ್ನು ವಿತರಣೆ ಮಾಡಿದ್ದಾರೆ.

 

 

ಇದೇ ರೀತಿ ತಮ್ಮ ತಾಯಿಯ ಆಸೆಯಂತೆ ಮಗ ವಿನೋದ್ ರಾಜ್ ಕುಮಾರ್ ಕೂಡ ಸಹ ಕಲಾವಿದರ ನೆರವಿಗೆ ಧಾವಿಸಿದ್ದಾರೆ.ಆ ದೇವರ ಆಣತಿಯಂತೆ ನಮ್ಮಿಂದ ಬೇರೊಬ್ಬರಿಗೆ ಏನನ್ನು ಕೊಡಲು ಸಾಧ್ಯವೋ ಅದನ್ನು ಹಂಚಿ ತಿನ್ನುವುದೇ ಸುಖ. ಆ ಭಗವಂತ ಯಾರಿಗೂ ಕಷ್ಟವನ್ನು ಕೊಡದೇ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ನಾವು ಕೊಟ್ಟ ಮಾತ್ರಕ್ಕೆ ಅವರ ಹೊಟ್ಟೆ ತುಂಬುವುದಿಲ್ಲ ಎಂಬುದು ನನಗೆ ತಿಳಿದಿದೆ.

 

 

ಆದರೆ ತನಗಾದ ವೇಳೆ ಮತ್ತೊಬ್ಬರಿಗೆ ಸಹಾಯ ಮಾಡುವ ಮನಸ್ಸು ಬರುತ್ತದೆ. ಅಲ್ಲದೇ, ಈ ರೀತಿ ಸಹಾಯ ಮಾಡುವುದರಿಂದ ನಮ್ಮ ಆತ್ಮತೃಪ್ತಿ ಸಿಗುತ್ತದೆ. ಹಾಗಾಗಿ ಈ ಕೆಲಸ ಮಾಡುತ್ತಿದ್ದೇವೆ. ಕೊರೊನಾವನ್ನು ಜಗತ್ತಿನಿಂದ ಒದ್ದು ಓಡಿಸೋಣ. ಯಾರಿಗೂ ಮತ್ತೊಬ್ಬರ ಮುಂದೆ ಕೈ ಚಾಚುವ ಸ್ಥಿತಿ ಬಾರದಿರಲಿ ಎಂದಷ್ಟೇ ಭಗವಂತನಲ್ಲಿ ಬೇಡುತ್ತೇನೆ ಎಂದು ಲೀಲಾವತಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •