ನವದೆಹಲಿ-ಸಂಕಷ್ಟದಲ್ಲಿ ಸಿಲುಕಿರುವ ಸಾಲಗಾರರಿಗ ಕೇಂದ್ರ ಸರ್ಕಾರ ದಸರಾ ಮತ್ತು ದೀಪಾವಳಿಗಾಗಿ ಗಿಫ್ಟ್ ನೀಡಿದ್ದು, 2 ಕೋಟಿ ರೂ.ಗಳವರೆಗಿನ ವಿವಿಧ ಸಾಲಗಳ ಮೇಲಿನ ಚಕ್ರ ಬಡ್ಡಿ (ಬಡ್ಡಿ ಮೇಲಿನ ಬಡ್ಡಿ)ಯನ್ನು ಮನ್ನಾ ಮಾಡುವುದಾಗಿ ತಡ ರಾತ್ರಿ ಘೋಷಿಸಿದೆ.  ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಜಾರಿಗೊಳಿಸಿದ ಸಾಲದ ಮೇಲಿನ ಇಎಂಐ ಪಾವತಿ ಗಡುವು ವಿಸ್ತರಣೆಯ ಸೌಲಭ್ಯವನ್ನು ಪಡೆದವರು ಮತ್ತು ಪಡೆಯದಿದ್ದವರಿಗೂ ಈ ಮನ್ನಾ ಅನ್ವಯಸಲಿದೆ.

ಬಡ್ಡಿ ಮನ್ನಾ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ ಬೆನ್ನಲ್ಲೇ ಕೇಂದ್ರ ಹಣಕಾಸು ಸೇವೆಗಳ ಇಲಾಖೆಯ ಈ ಸಂಬಂಧ ಕಾರ್ಯನಿರ್ವಹಣಾ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಕೇಂದ್ರ ಸರ್ಕಾರವು ಸಾಲಗಾರರ ಮೇಲಿನ ಚಕ್ರಬಡ್ಡಿ ಮನ್ನಾ ಮಾಡುವುದರಿಂದ ಬೊಕ್ಕಸಕ್ಕೆ 6,500 ಕೋಟಿ ರೂ.ಗಳಷ್ಟು ಹೊರ ಬೀಳಲಿದೆ.

ರಾಷ್ಟ್ರೀಕೃತ ಬ್ಯಾಂಕ್‍ಗಳು, ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ವಸತಿ, ಗೃಹ, ವಾಹನ, ಶಿಕ್ಷಣ, ಕೈಗಾರಿಕೆ(ಎಂಎಸ್‍ಎಂಇ), ದುಬಾರಿ ಗೃಹಬಳಕೆ ವಸ್ತುಗಳ ಖರೀದಿ, ಕ್ರೆಡಿಟ್ ಕಾರ್ಡ್‍ಗಳ ಬಾಕಿ, ವಾಣಿಜ್ಯ ಇತರ ಉದ್ದೇಶಗಳಿಗಾಗಿ 2 ಕೋಟಿ ರೂ.ಗಳವರೆಗಿನ ಸಾಲ ಪಡೆದ ಎಲ್ಲರೂ ಸಾಲದ ಮೇಲಿನ ಚಕ್ರಬಡ್ಡಿ ಮನ್ನಾ ಮಾಡುವುದಾಗಿ ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

waiver-loan

ಅ.14ರಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ್ದ ಸುಪ್ರೀಂಕೋರ್ಟ್, ಕೋವಿಡ್-19 ವೈರಸ್ ಹಾವಳಿಯಿಂದಾಗಿ ಆರ್‍ಬಿಐನ ಸಾಲ ಮರುಪಾವತಿ ವಿನಾಯಿತಿ ಗಡುವು ಯೋಝನೆ ಅಡಿ ಸಾಲಿಗರ ಮೇಲಿನ ಚಕ್ರಬಡ್ಡಿ ಮನ್ನಾ ಮಾಡಲು ಆದಷ್ಟೂ ಶೀಘ್ರ ನಿರ್ಧಾರ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿತ್ತು. ಶ್ರೀಸಾಮಾನ್ಯರು ಸಡಗರ ಮತ್ತು ಸಂಭ್ರಮದಿಂದ ಹಬ್ಬಗಳನ್ನು ಆಚರಿಸುವಂತೆ ಮಾಡುವುದು ಸರ್ಕಾರದ ಕೈಯಲ್ಲಿದೆ ಎಂದು ಸುಪ್ರೀಂಕೋರ್ಟ್ ಸಲಹೆ ಮಾಡಿತ್ತು.

ಹೊಸ ಮಾರ್ಗಸೂಚಿಗಳ ಪ್ರಕಾರ ಮಾ.1 ರಿಂದ ಆ.31, 2020ರ ಅವಧಿವರೆಗೆ ನಿರ್ದಿಷ್ಟ ಸಾಲ ಖಾತೆಗಳಲ್ಲಿನ ಸಾಲಗಾರರು ಚಕ್ರಬಡ್ಡಿ ಮನ್ನಾ ಸೌಲಭ್ಯವನ್ನು ಪಡೆಯಲಿದ್ದಾರೆ. ಫೆ.29ರ ನಂತರ ಅನ್ವಯವಾಗುವಂತೆ ಐದು ತಿಂಗಳ ಅವಧಿಗೆ 2 ಕೋಟಿ ರೂ.ಗಳವರೆಗಿನ ಸಾಲದ ಮೇಲಿನ ಚಕ್ರಬಡ್ಡಿ ಮನ್ನಾ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ತಮ್ಮ ಸಾಲದ ಮೇಲಿನ ಚಕ್ರಬಡ್ಡಿ ಮನ್ನಾ ಆಗುತ್ತದೋ ಅಥವಾ ಆಗುವುದಿಲ್ಲವೋ ಇಲ್ಲವೇ ವಿಳಂಬವಾಗುತ್ತದೋ ಎಂಬ ಗೊಂದಲದಲ್ಲಿದ್ದ ಸಾಲಗಾರರಿಗೆ ಕೇಂದ್ರ ಸರ್ಕಾರದ ಈ ಘೋಷಣೆಯಿಂದ ದೊಡ್ಡ ಮಟ್ಟದ ರಿಲೀಫ್ ಲಭಿಸಿದ್ದು, ಸಡಗರದಿಂದ ಹಬ್ಬಗಳನ್ನು ಆಚರಿಸುವಂತಾಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •