ಬೆಂಗಳೂರು: ಬ್ರಿಟನ್ ದೇಶದಿಂದ ಹೊಸ ಸ್ವರೂಪದ ಕೊರೋನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಇಂದಿನಿಂದಲೇ 9 ದಿನಗಳ ಕಾಲ, ಅಂದರೆ ಜನವರಿ 2ರವರೆಗೂ ರಾತ್ರಿ ಸಂಚಾರ ನಿಷೇಧಾಜ್ಞೆ ಜಾರಿಯಾಗಲಿದೆ. ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಇಂದು ವಿವಿಧ ಸಭೆಗಳಲ್ಲಿ ಚರ್ಚೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಈ ನಿರ್ಧಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಮೂಲಕ ಹೊಸ ಸ್ವರೂಪದ ಕೊರೋನಾ ವೈರಸ್ ಹರಡುವಿಕೆ ನಿಯಂತ್ರಿಸಲು ಕರ್ಫ್ಯೂ ಜಾರಿ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಬೆಂಗಳೂರಷ್ಟೇ ಅಲ್ಲ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.
ರಾತ್ರಿ 10 ಗಂಟೆಯ ನಂತರ ಜನರು ಮನೆಯಿಂದ ಹೊರಗೆ ಬರುವಂತಿಲ್ಲ. ಅಂಗಡಿ ಮುಂಗಟ್ಟುಗಳು ಬಾಗಿಲು ಬಂದ್ ಮಾಡಬೇಕು. ಅಂತರರಾಜ್ಯ ಜನ ಸಂಚಾರವನ್ನೂ ನಿಷೇಧಿಸಲಾಗಿದೆ. ಆದರೆ, ರಾತ್ರಿಯ ಹೊತ್ತು ಔಷಧ ಅಂಗಡಿ, ಆಸ್ಪತ್ರೆ ಇತ್ಯಾದಿ ಅಗತ್ಯ ಸೇವೆಗಳಿಗೆ ಅವಕಾಶ ಇರುತ್ತದೆ. ಜನವರಿ 1ರಂದು ಶಾಲೆಗಳನ್ನ ಪುನಾರಂಭಿಸುವ ಸರ್ಕಾರದ ನಿರ್ಧಾರವನ್ನು ಈ ವೇಳೆ ಪರಿಷ್ಕರಿಸಲಾಗಿಲ್ಲ.
ಇನ್ನೆರಡು ಮೂರು ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸಲಾಗುವುದು. ಸದ್ಯಕ್ಕೆ ಶಾಲೆಗಳನ್ನ ಆರಂಭಿಸುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.ನೈಟ್ ಕರ್ಫ್ಯೂ ಜಾರಿಯಾಗುವುದರೊಂದಿಗೆ ಈ ಬಾರಿಯ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದೆ. ಡಿ. 31ರಂದು ರಾತ್ರಿಯಿಡೀ ನಡೆಯುತ್ತಿದ್ದ ಹೊಸ ವರ್ಷಾಚರಣೆಗೆ ಈ ಬಾರಿ ಅವಕಾಶ ನೀಡುವುದು ಅನುಮಾನ.
ಇನ್ನು,ಬೆಳಗ್ಗೆ 6ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಎಂದಿನಂತೆ ಜನಜೀವನ ನಡೆಯಲು ಅನುವು ಮಾಡಿಕೊಡಲಾಗಿದೆ. ಈಗ ಇರುವ ಕೋವಿಡ್ ಮುನ್ನೆಚ್ಚರಿಕೆ ಮಾರ್ಗಸೂಚಿಗಳ ಪ್ರಕಾರ ಸಭೆ ಸಮಾರಂಭಗಳನ್ನ ನಡೆಸಲು ಅವಕಾಶ ಇದೆ. ರಾತ್ರಿ 10 ಗಂಟೆಯ ನಂತರವಷ್ಟೇ ಕರ್ಫ್ಯೂ ಜಾರಿಯಲ್ಲಿರಲಿದೆ.