ಭಾರತದಂತಹ ಸಾಮಾಜಿಕ ವ್ಯವಸ್ಥೆಯಲ್ಲಿ ತಾಯಿಯಾಗುವುದು ಎಂದರೆ ಅದೊಂತರ ಸಂಭ್ರಮದ ವಾತಾವರಣ. ಅಲ್ಲಿ ನಗು, ಖುಷಿ, ಸಂಭ್ರಮ, ವ್ಯಂಗ್ಯ ಎಲ್ಲವೂ ತುಂಬಿರುತ್ತದೆ. ಹೊಸ ಜೀವವೊಂದು ಜಗತ್ತಿಗೆ ಕಾಲಿಡುತ್ತಿದೆ ಎಂದರೆ ಅದು ಸಾಮಾನ್ಯವಾದ ಸಂಗತಿಯಲ್ಲ. ಅದರ ಹಿಂದೆ ಸಾಕಷ್ಟು ಕಟ್ಟುಪಾಡುಗಳು ಇವೆ. ಜೊತೆ ಜೊತೆಗೆ ಅದರದ್ದೇ ಆದ ಒಂದಷ್ಟು ಸಂಪ್ರದಾಯ, ಆಚರಣೆ ಮನ್ನಣೆಗಳ ಅಗತ್ಯವೂ ಇದೆ. ಸಮಾಜದ ಮನ್ನಣೆಯ ಮುದ್ರೆ ನೀಡಿದರೆ ಮಾತ್ರವೇ ಅದೆಲ್ಲವೂ ಸಲೀಸು. ಇಲ್ಲವಾದಲ್ಲಿ ಅದಕ್ಕೆ ಬೇರೆಯದೇ ಪಟ್ಟ ನೀಡಲಾಗುತ್ತದೆ.

ಇಂದು ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಎಲ್ಲವೂ ಸಲೀಸು. ಯಾವುದಕ್ಕೂ ಕಷ್ಟಪಡಬೇಕಲ್ಲ. ಎಲ್ಲವೂ ಅತ್ಯಂತ ಸುಲಭವಾಗಿ ಕೈಗೆಡಕುತ್ತದೆ. ಆಧುನಿಕತೆಯ ಜೀವನ ಶೈಲಿ, ಒತ್ತಡ, ಆಹಾರ ಪದ್ಧತಿ ಇವುಗಳೆದರ ಕಾರಣದಿಂದಾಗಿ ಮಕ್ಕಳು ಬಹು ಬೇಗನೇ ಪ್ರೌಢಾವಸ್ಥೆಗೆ ಬರುತ್ತಿದ್ದಾರೆ. ಮನೋಕಾಮನೆಗಳು ಅಷ್ಟೇ ಸಲೀಸಾಗಿ ಹೊರಬರುತ್ತದೆ. ಯಾವುದಕ್ಕೂ ಹಂಗಿಲ್ಲದಂತಾಗಿದೆ.ಆದರೆ ಒಂದು ಸಾಂಪ್ರದಾಯಿಕ ಸಮಾಜದಲ್ಲಿ ಇಂತಹ ಆಚರಣೆಗಳಿಗೆ ನಿಷೇಧವಿದೆ. ಇಂದಿಗೂ ಅದನ್ನು ಮಡಿ, ಮೈಲಿಗೆಯ ದೃಷ್ಟಿಯಿಂದಲೇ ನೋಡಲಾಗುತ್ತದೆ.

ನಮ್ಮ ಸಾಂಪ್ರದಾಯಿಕ ಸಮಾಜದಲ್ಲಿ 15 ವರ್ಷದ ಹುಡುಗಿ ಮದುವೆಗೂ ಮುನ್ನಾ ಗರ್ಭಿಣಿಯಾದರೆ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದು ವರ್ಣಿಸಲು ಸಾಧ್ಯವಿಲ್ಲ.ಈ ನಿಟ್ಟಿನಲ್ಲಿ ‘ಮಾ’ ಎಂಬ ಸಾಕ್ಷ್ಯಾಚಿತ್ರ ಅದೇ ವಿಚಾರವಾಗಿ ಮಾತನಾಡುತ್ತದೆ. ಅಲ್ಲದೇ, ವೀಕ್ಷಕರನ್ನು ಚಿಂತನೆಗೆ ಹಚ್ಚುತ್ತದೆ. ಇದು ಕೇವಲ ಸಾಕ್ಷ್ಯಾಚಿತ್ರವಷ್ಟೇ ಅಲ್ಲ. ವಾಸ್ತವತೆಯ ಅನಾವರಣ. ಒಂದು ತಾಯಿ ಮತ್ತು ಅವಳ ಮಗಳು ನಡುವಿನ ಸಂಬಂಧವನ್ನು ಮತ್ತು ಮಗಳು ಎದುರಿಸುತ್ತಿರುವ ಹದಿಹರೆಯದ ಗರ್ಭಧಾರಣೆಯನ್ನು ತೋರಿಸುತ್ತದೆ.

ಸಾಕ್ಷ್ಯಾಚಿತ್ರದಲ್ಲಿ ಅಮ್ಮು 15 ವರ್ಷ ವಯಸ್ಸಿನ ಅತ್ಯಾಸಕ್ತಿಯ ಹಾಕಿ ಆಟಗಾರ್ತಿ. ಹಾಕಿಯನ್ನು ಆಡುತ್ತಿರುವಾಗಲೇ ತಲೆ ಸುತ್ತಿ ಕ್ರೀಡಾಂಗಣದಲ್ಲೇ ಬೀಳುತ್ತಾಳೆ. ಆಕೆ ಗರ್ಭಿಣಿಯಾಗಿರುವ ಬಗ್ಗೆ ಆಕೆಗೆ ಅನುಮಾನ ಶುರುವಾಗುತ್ತದೆ. ಅದನ್ನು ಯಾರಾದರೊಬ್ಬರ ಬಳಿ ಹೇಳಿಕೊಳ್ಳಬೇಕು. ಆದರೆ ಅದನ್ನು ನಂಬುವವರಾದರೂ ಯಾರು? ಅದನ್ನು ಹೇಳಬಹುದಾದ ಮತ್ತು ನಂಬಬಹುದಾದ ಏಕೈಕ ವ್ಯಕ್ತಿಯೇ ಆಕೆಯ ತಾಯಿ ಸತ್ಯ. ಅಮ್ಮು ಹೇಳಿದ ಮಾತನ್ನು ನಂಬುತ್ತಾಳೆ.ಇದೇ ವಿಷಯವನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಿದ ಈ ಕಿರುಚಿತ್ರಕ್ಕೂ ಬೇರೆ ಕಿರುಚಿತ್ರಕ್ಕೂ ಸಾಕಷ್ಟು ವ್ಯತ್ಯಾಸಗಳನ್ನು ಗುರುತಿಸಬಹುದು. ಹಾಗಾದರೆ ಅದೇನು ಅಂತೀರಾ?

ಇಲ್ಲಿದೆ ನೋಡಿ. ಕುಟುಂಬದ ನೈಜ ಚಿತ್ರಣವನ್ನು ಇಲ್ಲಿ ಅನಾವರಣಗೊಳಿಸಲಾಗಿದೆ. ತಾಯಿ ಮತ್ತು ಮಗಳ ನಡುವಿನ ಸಂಬಂಧವನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಅಲ್ಲದೇ, ಮಧ್ಯಮ ವರ್ಗದ ಕುಟುಂಬಗಳಲ್ಲಿ ಇಂತಹ ಪರಿಸ್ಥಿತಿಯನ್ನು ನಿಬಾಯಿಸುವ ಪರಿಯನ್ನು ತೋರಿಸಲಾಗಿದೆ. ಯಾವುದೇ ಸಂಬಂಧ ಗಟ್ಟಿಯಾಗಿ ಉಳಿಯಬೇಕಾದರೆ, ನಂಬಿಕೆ ಎಂಬುದು ಎಷ್ಟು ಮುಖ್ಯ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಡಲಾಗಿದೆ.

ಚಿತ್ರದ ಹಿಂದಿರುವ ವ್ಯಕ್ತಿ ಸರ್ಜುನ್ ಕೆ. ಎಂ. ತೀಕ್ಷ್ಣವಾದ ಕಥೆಯನ್ನು ನಿರ್ವಹಿಸಿದ್ದಾರೆ. ಇದು ಸಾಕ್ಷಾತ್ಕಾರ, ಸಸ್ಪೆನ್ಸ್ ಮತ್ತು ಎಲ್ಲಾ ಸುಂದರವಾದ ಕ್ಷಣಗಳನ್ನು ಒಳಗೊಂಡಿದೆ. ಅದು ಕುಟುಂಬ ಎಂದು ಅರ್ಥೈಸುವ ನಿಜವಾದ ಅರ್ಥದಲ್ಲಿ ಚಿತ್ರೀಕರಿಸಲಾಗಿದೆ.ನೀವು ಈ ಕೆಳಗೆ ನೀಡಿರುವ ಲಿಂಕ್ ಅನ್ನು ಬಳಸಿ ಸಂಪೂರ್ಣ ಕಿರುಚಿತ್ರವನ್ನು ವೀಕ್ಷಿಸಬಹುದು. ಇದು ಈಗಾಗಲೇ ಎರಡು ದಶಲಕ್ಷ ವೀಕ್ಷಣೆಗಳನ್ನು ದಾಟಿದೆ!

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •