ಚಂದನವನಕ್ಕೆ ಬಾಲಿವುಡ್ನಿಂದ ನಟಿಯರು ಬರುವುದು ಹೊಸದೇನಲ್ಲ. ಈ ಸಾಲಿನಲ್ಲಿ ಇದೀಗ ಇನ್ನಿಬ್ಬರು ನಟಿಯರ ಹೆಸರೂ ಮುನ್ನೆಲೆಗೆ ಬಂದಿದೆ. ಸುದೀಪ್ ಅಭಿನಯದ ವಿಕ್ರಾಂತ್ ರೋಣಾ ಪಾತ್ರದ ಜತೆಗೆ ಹಾಡೊಂದರಲ್ಲಿ ಮತ್ತು ದೃಶ್ಯವೊಂದರಲ್ಲಿ ಜತೆಯಾಗಲು ಬಾಲಿವುಡ್ ನಟಿ ಕತ್ರಿನಾ ಕೈಫ್ ಅಥವಾ ನೋರಾ ಫತೇಹಿ ಬರಲಿದ್ದಾರೆ. ಹೀಗಾಗಿ ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚುವಂತಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಹೈದರಾಬಾದ್ನಲ್ಲಿ ಎರಡನೇ ಶೆಡ್ಯೂಲ್ ಚಿತ್ರೀಕರಣ ಕಂಪ್ಲೀಟ್ ಮಾಡಿದ ಕಿಚ್ಚ ಸುದೀಪ್ ಈಗ ಕೇರಳದತ್ತ ತಮ್ಮ ಚಿತ್ತವನ್ನು ಹರಿಸಿದ್ದಾರೆ. ಕೇರಳದಲ್ಲಿ ಡಿಸೆಂಬರ್ ಮೊದಲ ವಾರದಿಂದ 30 ದಿನಗಳ ಚಿತ್ರೀಕರಣ ಆರಂಭವಾಗಲಿದೆ. ‘ಈ ಚಿತ್ರದಲ್ಲಿ ಸೂಪರ್ ಆಗಿರುವ ಹಾಡೊಂದು ಇದೆ. ಆ ಹಾಡಿಗೆ ವಿಶೇಷ ವ್ಯಕ್ತಿಯೊಬ್ಬರು ಬೇಕಿರುವುದರಿಂದ ಕತ್ರಿನಾ ಕೈಫ್ ಅಥವಾ ನೋರಾ ಫತೇಹಿ ಅವರನ್ನು ಕರೆತರಲು ನಿರ್ಧಾರ ಮಾಡಿದ್ದೇವೆ. ಈಗಾಗಲೇ ಕತ್ರಿನಾ ಅವರ ಬಳಿ ಮಾತನಾಡಿ ಆಗಿದೆ. ಡೇಟ್ಸ್ ಮತ್ತಿತರ ಮಾತುಕತೆಗಳು ನಡೆಯುತ್ತಿವೆ. ಮುಖ್ಯ ಹಾಡಾದ್ದರಿಂದ ಅವರು ಇದ್ದರೆ ಸಿನಿಮಾಗೆ ಒಂದು ವಿಶೇಷ ಕಳೆ ಬರಲಿದೆ. ಇನ್ನು ಕತ್ರಿನಾ ಅವರ ಡೇಟ್ ಇಲ್ಲ ಅಂದರೆ ನೋರಾ ಫತೇಹಿ ಬರಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ ನಿರ್ಮಾಪಕ ಜಾಕ್ ಮಂಜು.
ಈಗಾಗಲೇ 80ಕ್ಕೂ ಹೆಚ್ಚು ದಿನ ಚಿತ್ರೀಕರಣ ಕಂಪ್ಲೀಟ್ ಮಾಡಿದೆ ಸುದೀಪ್ ಮತ್ತು ತಂಡ. ಕೇರಳದಲ್ಲಿ ಕೊನೆಯ ಶೆಡ್ಯೂಲ್ ಎನ್ನಲಾಗುತ್ತಿದೆ. ಬರಿಯ ಕಲಾವಿದರ ಲುಕ್ಗಳಿಂದಲೇ ಚಿತ್ರ ದೇಶಾದ್ಯಂತ ದೊಡ್ಡ ಸುದ್ದಿ ಮಾಡಿದೆ. ಸ್ಯಾಂಡಲ್ವುಡ್ನಲ್ಲಿ ಅತಿ ದೊಡ್ಡ ಬಜೆಟ್ನ ಸಿನಿಮಾ ಇದಾಗಲಿದೆ. ನಿರ್ದೇಶಕ ಅನೂಪ್ ಭಂಡಾರಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಕತ್ರಿನಾ ಕೈಫ್ ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಆಪ್ತರು. ಸುದೀಪ್ ಮತ್ತು ಸಲ್ಮಾನ್ ಆತ್ಮೀಯ ಸ್ನೇಹಿತರಾಗಿರುವುದರಿಂದ ಕತ್ರಿನಾ ಬಂದೇ ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೈದರಾಬಾದ್ನಲ್ಲಿ ಚಿತ್ರದ ಶೂಟಿಂಗ್ಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ದೊಡ್ಡ ಸೆಟ್ ಹಾಕಲಾಗಿತ್ತು. ಅದನ್ನು ಬೆಂಗಳೂರಿನ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಪ್ರದರ್ಶನಕ್ಕೆ ಇಡಲು ಚಿತ್ರತಂಡ ನಿರ್ಧರಿಸಿದೆ.
ಎರಡು ದಿನಗಳ ಹಿಂದೆಯಷ್ಟೇ ಸುದೀಪ್, ತಾವು ಕೇರಳದ ಶೆಡ್ಯೂಲ್ಗಾಗಿ ವರ್ಕೌಟ್ ಮಾಡುತ್ತಿದ್ದು, ಒಳ್ಳೆಯ ರಿಸಲ್ಟ್ ಬಂದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಒಟ್ಟಾರೆ ಬಾಲಿವುಡ್ ನಟಿಯರ ಆಗಮನವಾಗುತ್ತದೆ ಎಂಬ ಸುದ್ದಿಯಿಂದ ಸುದೀಪ್ ಅಭಿಮಾನಿಗಳು ಖುಷಿಯಾಗಿರುವುದಂತೂ ಸತ್ಯ. ”ನಮ್ಮ ಮೊದಲ ಆಯ್ಕೆ ಕತ್ರಿನಾ ಕೈಫ್. ಅವರನ್ನು ಈಗಾಗಲೇ ಸಂಪರ್ಕಿಸಿದ್ದೇವೆ. ಅವರು ಬಂದೇ ಬರುತ್ತಾರೆ, ಒಂದು ವೇಳೆ ಇಲ್ಲಎಂದಾದರೆ ನೋರಾ ಫತೇಹಿ ಅವರನ್ನು ಕರೆತರುತ್ತೇವೆ’ ಎಂದಿದ್ದಾರೆ ನಿರ್ಮಾಪಕ ಜಾಕ್ ಮಂಜು.