ರಾಜ್ಯದಲ್ಲಿ ಕೊರೊನಾ ಎರಡನೇ ಅಬ್ಬರಿಸಿ ಬೊಬ್ಬಿಡುತ್ತಿದೆ. ಇಡೀ ಜಗತ್ತಿನ ಮುಂದೆ ನಮ್ಮ ವೈದ್ಯಕೀಯ ವ್ಯವಸ್ಥೆಯ ಅನಾವರಣವಾಗುತ್ತಿದೆ. ಒಂದು ಕಡೆ ಬೆಡ್ ಸಿಗದೇ ಜನರು ಪರದಾಡುತ್ತಿದ್ದರೆ ಮತ್ತೊಂದು ಕಡೆ ಆಕ್ಸಿಜನ್ ಕೊರತೆಯಿಂದಾಗಿ ನರಳಾಡುವಂತಾಗಿದೆ.

ಯಾವುದೇ ಆಸ್ಪತ್ರೆಗಳಲ್ಲಿ ಬೆಡ್ ಸಿಗುವುದು ದೂರದ ಮಾತು ಎನ್ನುವಂತಾಗಿದೆ. ಹೀಗಿರುವಾಗ ನಟಿ ಶೃತಿ ಹರಿಹರನ್ ಸಹ ತಮ್ಮ ಸ್ನೇಹಿತರಿಗೆ ಆಸ್ಪತ್ರೆಯಲ್ಲಿ ಬೆಡ್ ಕೊಡಿಸಲು 13 ಗಂಟೆಗಳ ಕಾಲ ಸತತವಾಗಿ ಶ್ರಮವಹಿಸಿದ್ದಾರೆ. ಕೊರೊನಾ ಸಂಕಷ್ಟದ ಜೊತೆಗೆ ಬೆಡ್ ಪಡೆಯಬೇಕಾದರೆ ಏನೆಲ್ಲಾ ಕೆಲಸ ಮಾಡಬೇಕಾಗುತ್ತದೆ ಎಂದು ಕೂಡ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

 

 

 

ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಶೃತಿ, ಕೊರೊನಾ ಸೋಂಕಿತ ಸ್ನೇಹಿತರೊಬ್ಬರಿಗೆ ಐಸಿಯು ಬೆಡ್ ಕೊಡಿಸಲು ಹರಸಾಹಸ ಪಡಬೇಕಾಯಿತು. ಇದೇ ಕಾರಣಕ್ಕೆ ಬರೋಬ್ಬರಿ 13 ಗಂಟೆಗಳ ಕಾಲ ಐಸಿಯು ಬೆಡ್‍ಗಾಗಿ ಪರದಾಡಿದ್ದೇವೆ. ಇದರಿಂದಾಗಿ ಉತ್ತಮವಾದ ಪಾಠವನ್ನೇ ಕಲಿತಿದ್ದೇವೆ ಎಂದು ನೊಂದು ನುಡಿದಿದ್ದಾರೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಪಡೆಯಬೇಕಾದರೆ, ಈ ನಿಯಮಗಳನ್ನು ತಪ್ಪದೇ ಪಾಲಿಸಿ ಎಂದು ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಬೆಡ್ ಪಡೆಯಲು ಹಲವಾರು ಹಂತಗಳನ್ನು ದಾಟಬೇಕಾಗುತ್ತದೆ. ಇಂಸಬಂಧ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ವಿಪರ್ಯಾಸವೆಂದರೆ, ಯಾರಿಗಾಗಿ 13 ಗಂಟೆಗಳ ಕಾಲ ಬೆಡ್‍ಗಾಗಿ ಪರದಾಡಿದೆವೋ ಅವರು ಇಂದು ನಮ್ಮೊಂದಿಗೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸೂಕ್ತ ಸಮಯದಲ್ಲಿ ಐಸಿಯು ಬೆಡ್ ಸಿಗದ ಕಾರಣ ಕೊನೆಯುಸಿರೆಳೆದರು ಎಂದು ಬೇಸರ ಹೊರಹಾಕಿದ್ದಾರೆ.

 

ಇತ್ತೀಚೆಗೆ ಹಾಸ್ಯನಟ ಕೋಮಲ್ ಅವರಿಗೆ ಚಿಕಿತ್ಸೆ ಕೊಡಿಸಲು ಪರದಾಡಬೇಕಾದ ಪರಿಸ್ಥಿತಿಯ ಬಗ್ಗೆ ನಟ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದೇ ಕೊರೊನಾ ಕಾರಣದಿಂದಾಗಿ ಕನ್ನಡ ಚಿತ್ರರಂಗದ ನಿರ್ಮಾಪಕ ಕೋಟಿ ರಾಮು ಅವರು ನಿಧನ ಹೊಂದಿದ್ದರು. ಇದಾದ ಬಳಿಕ ಚಿತ್ರರಂಗದ ಸಾಕಷ್ಟು ಮಂದಿ ಕೊರೊನಾಕ್ಕೆ ಬಲಿಯಾಗಿರುವುದನ್ನು ಈ ವೇಳೆ ಸ್ಮರಿಸಬಹುದು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಭೀಕರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •