ಲಾಕ್ಡೌನ್ ನಲ್ಲಿ ಬಡ ಜನರಿಗೆ ಅನುಕೂಲವಾಗಲಿ ಅಂತ ಸರಕಾರ ಕೊಟ್ಟಿರುವ ಅನ್ನಭಾಗ್ಯ ಅಕ್ಕಿ ಖದೀಮರ ಪಾಲಾಗುತ್ತಿದೆ. ಪಡಿತರ ಅಂಗಡಿಯಲ್ಲಿ ಕೊಟ್ಟ ಅಕ್ಕಿಯನ್ನು ಖದೀಮರು ಹೆಚ್ಚಿನ ಬೆಲೆಗೆ ಖರೀದಿಸಿ ಹಾವೇರಿ, ಹುಬ್ಬಳ್ಳಿ ಮೂಲಕ ಮುಂಬೈಗೆ ಕಳುಹಿಸುತ್ತಾರೆ.

ಈ ದಂದೆಯಲ್ಲಿ ಆ ಪಕ್ಷ-ಈ ಪಕ್ಷ ಅಂತ ಇಲ್ಲ. ಬಹುತೇಕ ರಾಜಕೀಯ ಬಲ ಇದ್ದವರೇ ಈ ದಂದೆಯಲ್ಲಿ ತೊಡಗುವ ಸಾಧ್ಯತೆ ಹೆಚ್ಚು.

ಹೀಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿದ ಖಚಿತ ಮಾಹಿತಿ ಪಡೆದ ಸೈಬರ್ ಠಾಣೆಯ ಇನ್ಸ್‌ಪೆಕ್ಟರ್ ಟಿ ಮಹಾಂತೇಶ್ ಹಾಗೂ ಸಿಬ್ಬಂದಿ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ಕಾರ್ಯಚರಣೆ ನಡೆಸಿ ಲಕ್ಷಾಂತರ ರೂ.ಮೌಲ್ಯದ ಅನ್ನಭಾಗ್ಯ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.

ಹಿರೇವಡ್ಡಟ್ಟಿ ಗ್ರಾಮದ ಬಿಜೆಪಿ ಮುಖಂಡ, ಗುತ್ತಿಗೆದಾರ ಆನಂದ ನಾಗರಳ್ಳಿ, ಕಾಂಗ್ರೆಸ್ ಮುಖಂಡ ಮಹಬೂಬಸಾಬ್ ಮುಂಡರಗಿ, ಹಾಗೂ ಷಣ್ಮುಖಪ್ಪ ಎಂಬುವವರು ಮನೆ ಕಮ್ ಅಂಗಡಿಗಳಲ್ಲಿ ಈ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿದ್ದರು ಎನ್ನಲಾಗಿದೆ.

ಆನಂದ ನಾಗರಳ್ಳಿ ಎಂಬಾತ ಹಿರೇವಡ್ಡಟ್ಟಿ ಗ್ರಾಮದ ವಿವಿಧೆಡೆ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಖರೀದಿಸಿ ಗದಗ ಮೂಲದ ವ್ಯಕ್ತಿಗೆ ಸಾಗಿಸುತ್ತಿದ್ದ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸುಮಾರು 60 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿರುವ ಪೊಲೀಸರು ಆಹಾರ ಇಲಾಖೆಯ ಸುಪರ್ದಿಗೆ ಒಪ್ಪಿಸಿದ್ದು‌, ಮುಂಡರಗಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •