ಹಿರಿಯ ಪತ್ರಕರ್ತ ರವಿ ಬೆಳೆಗೆರೆ ಇನ್ನಿಲ್ಲ..!

ಬೆಂಗಳೂರು : ಹಾಯ್ ಬೆಂಗಳೂರು ವಾರಪತ್ರಿಕೆ ಸಂಸ್ಥಾಪಕರು ,ಹಿರಿಯ ಪತ್ರಕರ್ತ ರವಿ ಬೆಳೆಗೆರೆ (62) ನ.12 ರ ಮಧ್ಯರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 1958 ರ ಮಾರ್ಚ್ 15 ರಂದು ಬಳ್ಳಾರಿಯಲ್ಲಿ ಜನಿಸಿದ್ದ ರವಿ ಬೆಳೆಗೆರೆ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ನಂತರ ಪತ್ರಿಕೋದ್ಯಮ ವೃತ್ತಿ ಪ್ರಾರಂಭಿಸಿದ್ದರು. ಬದುಕು ಕಟ್ಟಿಕೊಳ್ಳಲು ಶುರುಮಾಡಿದ ರವಿ ಬೆಳೆಗೆರೆ ಅವರು ಮೊದಲು ಸೇರಿದ್ದು ಬೆಂಗಳೂರಿನ ರಾಜಾಜನಗರದಲ್ಲಿದ್ದ  ‘ಅಭಿಮಾನ’ ಪತ್ರಿಕೆಗೆ.

ನಂತರ  ಹಾಯ್ ಬೆಂಗಳೂರ್ ವಾರಪತ್ರಿಕೆ ಹಾಗೂ ‘ಓ ಮನಸೇ’ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದರು. ಜೊತೆಗೆ ಅವರು ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಈ-ಟಿವಿ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದರು.

ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆ ಯ ಸಂಸ್ಥಾಪಕರು, ಹಾಯ್ ಬೆಂಗಳೂರ್’ ಪತ್ರಿಕೆ ಪ್ರಾರಂಭಿಸುವ ಮುನ್ನ ಕರ್ಮವೀರ, ಸಂಯುಕ್ತ ಕರ್ನಾಟಕ ಮತ್ತು ಕಸ್ತೂರಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು.

ರವಿ ಬೆಳೆಗೆರೆ ಅವರ ಬಾಟಮ್ ಐಟಮ್, ಖಾಸ್ ಬಾತ್ ಅಂಕಗಳು ಅತ್ಯಂತ ಜನಪ್ರಿಯ. ಹಿಮಾಗ್ನಿ, ನೀನಾ ಪಾಕಿಸ್ತಾನ? ಡಿ ಕಂಪನಿ, ದಂಗೆಯ ದಿನಗಳು ಸೇರಿದಂತೆ ಅನೇಕ ಜನಪ್ರಿಯ ಕೃತಿಗಳನ್ನು ರಚಿಸಿದ್ದರು.

ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ್ದ ರವಿ ಬೆಳೆಗೆರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ರವಿ ಬೆಳೆಗೆರೆ ಅವರು ಸ್ಥಾಪಿಸಿರುವ ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Ravi Belagere

# ಪತ್ರಿಕೋದ್ಯಮದಲ್ಲಿ ರವಿ ಬೆಳೆಗೆರೆ  : 
ಪತ್ರಕರ್ತನ ವೃತ್ತಿಯಲ್ಲಿ ಹೇಗಿರಬೇಕು ಮತ್ತು ಅದರ ಅಕ್ಷರಗಳು ಹೇಗೆ ಇರಬೇಕು ಎಂಬುದರ ಬಗ್ಗೆ ತಿಳಿಸಿದ್ದು ರವಿಬೆಳೆಗೆರೆ. ಹೊಸ ಯುಗದ ಪತ್ರಕರ್ತರಿಗೆ ಮಾಧ್ಯಮ ಆಕರ್ಷಿಸಿದ್ದು ರವಿ ಅವರ ಬರಹ. ರವಿ ಬೆಳಗೆರೆ ಬಳ್ಳಾರಿಯಿಂದ ಬೆಂಗಳೂರಿಗೆ ಬಂದಾಗ ಅದು ರಾಜ್ ಕುಮಾರ್ ರಸ್ತೆಯಲ್ಲಿ ಇದ್ದರು. ಬದುಕು ಕಟ್ಟಿಕೊಳ್ಳಲು ಶುರುಮಾಡಿದ ರವಿ ಬೆಳೆಗೆರೆ ಅವರು ಮೊದಲು ಸೇರಿದ್ದು ಅಭಿಮಾನ ಪತ್ರಿಕೆಗೆ. ಇಲ್ಲಿ ಅವರು ತಮ್ಮ ವೃತ್ತಿ ನೈಪುಣ್ಯತೆಯನ್ನು ಪ್ರದರ್ಶಿಸಿ ಮುಂದೆ ಅವರು ಹಾಯ್ ಬೆಂಗಳೂರ್ ಎಂಬ ವಾರಪತ್ರಿಕೆಯನ್ನು ಶುರುಮಾಡಿ ಪತ್ರಿಕಾ ರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದರು.

ನಂತರ ದೃಶ್ಯಮಾಧ್ಯಮಗಳಲ್ಲಿ ಅಪರಾಧ ವರದಿಗಾರಿಕೆ ಹಾಗೂ ಅದರ ಹಿನ್ನೆಲೆ ಧ್ವನಿಯನ್ನು ನೀಡುತ್ತಾ ಹಲವಾರು ಪ್ರಕರಣಗಳನ್ನು ಕೂಡ ಬರೆದು ಎಲ್ಲರಿಗೂ ಅವರು ಸದಾ ಅಚ್ಚರಿಯ ವ್ಯಕ್ತಿಯಾಗಿ ಕಾಣುತ್ತಿದ್ದರು.

ತಾನು ಹಿಂದೆ ಅನುಭವಿಸಿದ ಕಷ್ಟ ಹಾಗೂ ನಡೆದುಬಂದ ದಾರಿಯನ್ನು ಸದಾ ಸ್ಮರಿಸುವ ಅವರು ತಮ್ಮ ಅಭಿಮಾನ ಪತ್ರಿಕೆಯಲ್ಲಿ ಕಳೆದ ದಿನಗಳು ಹಾಗೂ ಟಿ ವೆಂಕಟೇಶ್ ಅವರ ಬಗ್ಗೆ ಇದ್ದ ಅಪಾರ ಅಭಿಮಾನವನ್ನು ತಮ್ಮ ಅಕ್ಷರದಲ್ಲಿ ಆಗಾಗ ಬರೆಯುತ್ತಿದ್ದರು ನೆನೆಯುತ್ತಿದ್ದರು ಹಲವರ ಬಳಿ ಹೇಳುತ್ತಿದ್ದರು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •