ರಶ್ಮಿಕಾ ಮಂದಣ್ಣ 2020 ರಲ್ಲಿ ಟಾಲಿವುಡ್’ನ ಅತ್ಯಂತ ಯಶಸ್ವಿ ನಾಯಕಿ. ಏಕೆಂದರೆ ಈ ವರ್ಷ ಬಿಡುಗಡೆಯಾದ ಅವರ ಎರಡು ಚಿತ್ರಗಳಾದ ಸರಿಲೇರು ನೀಕೆವ್ವರು ಮತ್ತು ಭೀಷ್ಮಾ ಸೂಪರ್ ಹಿಟ್ ಆಯಿತು. ಇದೀಗ ರಶ್ಮಿಕಾ ‘ಮಿಷನ್ ಮಜ್ನು ಚಿತ್ರದ ಮೂಲಕ ಬಾಲಿವುಡ್’ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಹೌದು, ರಶ್ಮಿಕಾ ಬುಧವಾರ ತಮ್ಮ ಮುಂದಿನ ಚಿತ್ರ ‘ಮಿಷನ್ ಮಜ್ನು’ ಬಗ್ಗೆ ಘೋಷಿಸಿದ್ದು, ಚಿತ್ರದಲ್ಲಿ ಅವರು ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ. ಭಾರತದ ಶ್ರೇಷ್ಠ ರಹಸ್ಯ ಕಾರ್ಯಾಚರಣೆ ಆಧರಿಸಿ ನಿರ್ಮಾಣವಾಗುತ್ತಿರುವ ‘ಮಿಷನ್ ಮಜ್ನು’ವನ್ನು ಶಾಂತನು ಬಾಗ್ಚಿ ನಿರ್ದೇಶಿಸಲಿದ್ದಾರೆ .
ಉರಿ: ದಿ ಸರ್ಜಿಕಲ್ ಸ್ಟ್ರೈಕ್ನಂತಹ ಚಲನಚಿತ್ರಗಳ ನಂತರ, ರೋನಿ ಸ್ಕ್ರೂವಾಲಾ ಈಗ ನಿರ್ಮಾಪಕರಾದ ಅಮರ್ ಬುಟಾಲಾ ಮತ್ತು ಗರಿಮಾ ಮೆಹ್ತಾ ಅವರೊಂದಿಗೆ ಸಹಭಾಗಿತ್ವದಲ್ಲಿ ಮಿಷನ್ ಮಜ್ನು ನಿರ್ಮಿಸಲಿದ್ದಾರೆ. ಈ ಚಿತ್ರವು 1970 ರ ದಶಕದ ನೈಜ ಘಟನೆಗಳಿಂದ ಪ್ರೇರಿತವಾಗಿದೆ . ಪರ್ವೀಜ್ ಶೇಖ್, ಅಸೀಮ್ ಅರೋರಾ, ಮತ್ತು ಸುಮಿತ್ ಬಾಥೆಜಾ ಅವರು ಬರೆದ ಈ ಥ್ರಿಲ್ಲರ್ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ‘ರಾ ಏಜೆಂಟ್’ ಪಾತ್ರ ನಿರ್ವಹಿಸುತ್ತಿದ್ದಾರೆ.
ನಿರ್ಮಾಪಕ ರೋನಿ ಸ್ಕ್ರೂವಾಲಾ ಚಿತ್ರದ ಬಗ್ಗೆ ಮಾತನಾಡಿ, “ನಮ್ಮ ದೇಶವನ್ನು ಶತ್ರುಗಳಿಂದ ರಕ್ಷಿಸಲು ತೆರೆಮರೆಯಲ್ಲಿ ಕೆಲಸ ಮಾಡುವ 1000 ಜನ ವೀರ ಯೋಧರಿದ್ದಾರೆ. ಅವರ ಸಾಹಸ ಹೆಚ್ಚಾಗಿ ಯಾರ ಗಮನಕ್ಕೂ ಬರುವುದಿಲ್ಲ. ಆದ್ದರಿಂದ ಮಿಷನ್ ಮಜ್ನು ಮೂಲಕ ಯೋಧರ ತ್ಯಾಗವನ್ನು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಕಿರಿಕ್ ಪಾರ್ಟಿ, ಅಂಜನಿ ಪುತ್ರ ಮತ್ತು ಗೀತಾ ಗೋವಿಂದಂ ಸೇರಿದಂತೆ ದಕ್ಷಿಣದಲ್ಲಿ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಬಾಲಿವುಡ್’ಗೆ ಬಹುನಿರೀಕ್ಷಿತವಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಮಿಷನ್ ಮಜ್ನು ಚಿತ್ರದಲ್ಲಿ ನಟಿಸುವುದಕ್ಕೆ ಅವಕಾಶ ನೀಡಿದ್ದಕ್ಕಾಗಿ ತಯಾರಕರಿಗೆ ಕೃತಜ್ಞತೆ ಹೇಳಿರುವ ರಶ್ಮಿಕಾ, ಈ ಚಿತ್ರತಂಡದ ಭಾಗವಾಗಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.
ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಅನುಭವಿ ಸ್ಟಾರ್ ನಟಿಯರು ಗಳಿಸದ ಯಶಸ್ಸನ್ನು ಕಂಡಿದ್ದಾರೆ. ಈಗ ಅವರು ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಒಬ್ಬರು. ಸದ್ಯ ತಮಿಳು, ತೆಲುಗು ಮತ್ತು ಕನ್ನಡದ ಕೆಲವು ಚಲನಚಿತ್ರಗಳಿಗೆ ರಶ್ಮಿಕಾ ಸಹಿ ಹಾಕುತ್ತಿದ್ದಾರೆ. ಇತ್ತೀಚಿಗೆ ರಶ್ಮಿಕಾ, ಮ್ಯೂಸಿಕ್ ವಿಡಿಯೋಕ್ಕಾಗಿ ಭಾರತೀಯ ರ್ಯಾಪರ್ ಬಾದ್ಶಾ ಅವರೊಂದಿಗೆ ಕೈಜೋಡಿಸಿದ್ದರು. ಈ ಮ್ಯೂಸಿಕ್ ವಿಡಿಯೋ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಪ್ರಸ್ತುತ ರಶ್ಮಿಕಾ ಮಂದಣ್ಣ ಚಂಡೀಘರ್’ನಲ್ಲಿ ಬಾದ್ಶಾ ತಂಡ ಸೇರಿಕೊಂಡಿದ್ದಾರೆ. ಸಾಗಾ ಮ್ಯೂಸಿಕ್ ಮತ್ತು ವೈಆರ್ ಎಫ್ ಸಹಯೋಗದೊಂದಿಗೆ ಮ್ಯೂಸಿಕ್ ವಿಡಿಯೋವನ್ನು ನಿರ್ಮಾಣ ಮಾಡುತ್ತಿದ್ದು, ಬಾದ್ಶಾ, ಅಮಿತ್ ಉಚಾನಾ, ಯುವನ್, ಮತ್ತು ರಶ್ಮಿಕಾ ಮಂದಣ್ಣದಲ್ಲಿ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಹೊಸ ಹೊಸ ಪ್ರಯೋಗಕ್ಕೆ ಇಳಿಯುತ್ತಿರುವುದು ಕುತೂಹಲಕಾರಿಯಾಗಿದೆ.