ಡಬ್ಲಿನ್‌: ಬೆಂಗಳೂರು ಮೂಲದ ಮಹಿಳೆ ಮತ್ತು ಇಬ್ಬರು ಮಕ್ಕಳು ನಿಗೂಢವಾಗಿ ಐರ್ಲೆಂಡಿನಲ್ಲಿ ಸಾವನ್ನಪ್ಪಿದ್ದಾರೆ.

ಸೀಮಾ ಬಾನು(37), ಮಗಳು ಅಫ್ರಿಯಾ(11) ಮಗ ಫಜಾನ್‌(06) ದಕ್ಷಿಣ ಡಬ್ಲಿನ್‌ನಲ್ಲಿರುವ ಬ್ಯಾಲಿಂಟೀರ್ ಲೆವೆಲಿನ್ ಎಸ್ಟೇಟ್ ನಲ್ಲಿರುವ ನಿವಾಸದಲ್ಲಿ ಮೃತಪಟ್ಟಿದ್ದಾರೆ.

ಹಲವು ವರ್ಷಗಳ ಹಿಂದೆ ಸೀಮಾ ಬಾನು ಬೆಂಗಳೂರು ಅಥವಾ ಮೈಸೂರಿನಿಂದ ಡಬ್ಲಿನ್‌ಗೆ ಆಗಮಿಸಿದ್ದರು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

Mystery-in-Ireland

ಇಬ್ಬರು ಮಕ್ಕಳು ಒಂದು ಕೊಠಡಿಯಲ್ಲಿ, ತಾಯಿಯ ಶವ ಮತ್ತೊಂದು ಕೊಠಡಿಯಲ್ಲಿ ಪತ್ತೆಯಾಗಿದೆ. ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಸೀಮಾ ಬಾನು ಸಾವನ್ನಪ್ಪಿದ್ದು ಹೇಗೆ ಎಂದು ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಪ್ರಕಟವಾಗಬೇಕಿದೆ.

ಸಮೀಪದ ನಿವಾಸಿಗಳ ಜೊತೆ ಉತ್ತಮ ಸಂಬಂಧದಲ್ಲಿದ್ದ ಸೀಮಾ ಬುಧವಾರ ಯಾರಿಗೂ ಕಾಣಿಸಿರಲಿಲ್ಲ. ಹೀಗಾಗಿ ಅನುಮಾನ ಬಂದು ಸಮೀಪದ ನಿವಾಸಿಗಳು ಮನೆಗೆ ಬಂದು ವೀಕ್ಷಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಮೀಪದ ನಿವಾಸಿಗಳು ಬಳಿಕ ಸೀಮಾ ಪತಿಗೆ ವಿಚಾರ ತಿಳಿಸಿದ್ದಾರೆ.

ಈ ವರ್ಷದ ಮೇ ತಿಂಗಳಿನಲ್ಲಿ ಸೀಮಾ ಮೇಲೆ ಹಲ್ಲೆ ನಡೆದಿತ್ತು. ವ್ಯಕ್ತಿಯೊಬ್ಬ ಇವರ ಮೇಲೆ ಹಲ್ಲೆ ಮಾಡಿದ್ದ. ಈ ಘಟನೆಯ ಬಳಿಕ ಸೀಮಾ ಅವರು ಕುಟುಂಬದ ಸುರಕ್ಷತೆಯ ಬಗ್ಗೆ ಭಯಗೊಂಡಿದ್ದರು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಆತನೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣ ಸಂಬಂಧ ತನಿಖೆ ಆರಂಭಗೊಂಡಿದ್ದು ಪತಿ ಸಹಕಾರ ನೀಡುತ್ತಿದ್ದಾರೆ.

ಸೀಮಾ ಬಾನು ಮೃತರಾದ ಹಿನ್ನೆಲೆಯಲ್ಲಿ ನಿವಾಸಿಗಳು ಮೊಂಬತ್ತಿ ಹೊತ್ತಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •