ಅನುಕಂಪ ಆಧಾರಿತ ಸರ್ಕಾರಿ ನೌಕರಿ ನೀಡಲು ನಿಯಮಾವಳಿ ತಿದ್ದುಪಡಿಗೆ ಒಪ್ಪಿಗೆ, ವಿವಾಹಿತ ಹೆಣ್ಣು ಮಕ್ಕಳಿಗೂ ಅನುಕಂಪ ಆಧಾರಿತ ನೌಕರಿ ಕೊಡಲು ನಿಯಮ ತಿದ್ದುಪಡಿ, ಸ್ವಚ್ಛ ಭಾರತ ಮಿಷನ್ ಅಡಿ 5.50 ಲಕ್ಷ ಮನೆಗಳಿಗೆ ಮುಂದಿನ ಐದು ವರ್ಷದಲ್ಲಿ ಶೌಚಾಲಯ ನಿರ್ಮಾಣ ಮಾಡಲು ಅನುಮತಿ ಸೇರಿದಂತೆ ಹಲವು ಯೋಜನೆಗಳಿಗೆ ನಿನ್ನೆ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಿನ್ನೆ ಸಂಜೆ ನಡೆದ ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ, ಅನುಕಂಪ ಆಧಾರಿತ ಸರ್ಕಾರಿ ನೌಕರಿ ನೀಡಲು ನಿಯಮಾವಳಿ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ. ಮೃತ ಸರ್ಕಾರಿ ನೌಕರನಿಗೆ ಒಂದು ವೇಳೆ ತಂದೆ-ತಾಯಿ ಇಲ್ಲದಿದ್ದರೆ ಅವರನ್ನು ಪೋಷಣೆ ಮಾಡುತ್ತಿದ್ದವರಿಗೆ ಸರ್ಕಾರಿ ನೌಕರಿ ಕೊಡಬಹುದು.

Marriage

ಗಂಡು ಮಕ್ಕಳು ಇಲ್ಲದಿದ್ದಲ್ಲಿ ಹೆಣ್ಣು ಮಗಳಿಗೆ ಮದುವೆಯಾಗಿದ್ದರೂ ಕೂಡ ಅನುಕಂಪದ ಆಧಾರದಲ್ಲಿ ನೌಕರಿ ಕೊಡಬಹುದಾಗಿದೆ ಎಂದು ಮಾಹಿತಿ ನೀಡಿದರು. ಕರ್ನಾಟಕ ಗೃಹ ನಿರ್ಮಾಣದಿಂದ ವಿನ್ಯಾಸ ಮತ್ತು ನಕ್ಷೆಗೆ ಅನುಮೋದನೆ ಪಡೆಯದೆ ನಿರ್ಮಾಣ ಮಾಡಲಾಗಿರುವ 59 ಕಾಮಗಾರಿಗಳಿಗೆ ಮತ್ತು ಪೂರ್ಣಗೊಳಿಸಲು ಬಾಕಿ ಇರುವ 6 ಸೇರಿ ಒಟ್ಟು 65 ವಸತಿ ಬಡಾವಣೆಗಳಿಗೆ ಯಥಾಸ್ಥಿತಿ ವಿನ್ಯಾಸಕ್ಕೆ ಅನುಮೋದನೆ ನೀಡಿದ ಒಂದು ಬಾರಿ ಇವುಗಳ ಸಕ್ರಮಕ್ಕೆ ತೀರ್ಮಾನಿಸಲಾಗಿದೆ ಎಂದು ಹೇಳಿದರು. ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ದುಡಿಮೆ ಬಂಡವಾಳ ಸಾಲದ ಮರುಪಾವತಿಗೆ ಬ್ಯಾಂಕ್ ಗ್ಯಾರಂಟಿಯನ್ನು ಮತ್ತೊಂದು ವರ್ಷ ವಿಸ್ತರಿಸಲು ಅನುಮತಿ ನೀಡಲಾಗಿದೆ. 31 ಕೋಟಿ ರೂ. ಸಾಲದಲ್ಲಿ 7 ಕೋಟಿ ರೂ. ಪಾವತಿಸಿದ್ದು, ಇನ್ನು 24 ಕೋಟಿ ರೂ. ಬಾಕಿ ಇದೆ. ಈ ಸಾಲದ ಮೊತ್ತಕ್ಕೆ ಸರ್ಕಾರ ಮತ್ತೊಂದು ವರ್ಷ ಬ್ಯಾಂಕ್ ಗ್ಯಾರಂಟಿಯನ್ನು ವಿಸ್ತರಿಸುತ್ತಿದೆ.

ಇ ಆಡಳಿತ ಯೋಜನೆಯಡಿ ವಿಡಿಯೋ ಸಂವಾದ ವ್ಯವಸ್ಥೆಯನ್ನು ಎಲ್ಲಾ ತಾಲೂಕು ಪಂಚಾಯಿತಿಗಳು ಹಾಗೂ ಐದು ಪ್ರಾದೇಶಿಕ ಕಚೇರಿಗಳಲ್ಲಿ ಒಟ್ಟು 35 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು. ಅಂಗನವಾಡಿ ಸಹಾಯಕರಿಗೆ ಸಮವಸ್ತ್ರ ಕೊಡಲು ಹ್ಯಾಂಡ್​​ಲೂಮ್ ಕಾರ್ಪೋರೇಷನ್​​ನಿಂದ ತಲಾ ಎರಡು ಸೀರೆಯಂತೆ 10.27 ಕೋಟಿ ರೂ. ವೆಚ್ಚದಲ್ಲಿ 65,911 ಅಂಗನವಾಡಿ ಕಾರ್ಯರ್ತೆಯರು ಹಾಗೂ ಸುಮಾರು 62 ಸಹಾಯಕರಿಗೆ ಸೀರೆ ವಿತರಣೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಇದರ ಜೊತೆಗೆ ಹಿರಿಯ ನಾಗರಿಕರಿಗೆ ಐಸಿಡಿಎಸ್ ಮತ್ತು ಪೋಷಣ್​ ಅಭಿಯಾನ್ ಅಡಿಯಲ್ಲಿ ಒಂದು ಜೊತೆ ಹೆಚ್ಚುವರಿ ಸಮವಸ್ತ್ರ ನೀಡಲಾಗುತ್ತದೆ ಎಂದರು. 2020-21ನೇ ಸಾಲಿನಲ್ಲಿ 1500 ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ಖರೀದಿಸಲು 12.75 ಕೋಟಿ ರೂ. ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ನಂಜನಗೂಡು ತಾಲೂಕಿನ ಹೊಸಪುರ ಗ್ರಾಮದಲ್ಲಿ ಕೆರೆಯಿಂದ ನೀರನ್ನು ಎತ್ತಿ ಗುಂಡ್ಲುಪೇಟೆ ತಾಲೂಕಿನ 9 ಕೆರೆಗಳಿಗೆ,

ಸಣ್ಣ ಕೆರೆಗಳಿಗೆ ನೀರನ್ನು ತುಂಬಿಸುವ ಸುಮಾರು 14 ಕೋಟಿ ರೂ. ವೆಚ್ಚದ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ 19 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರನ್ನು ತುಂಬಿಸುವ ಬೆನಕನಹಳ್ಳಿ ಏತ ನೀರಾವರಿ ಯೋಜನೆಗೆ 48 ಕೋಟಿ ರೂ. ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಕರ್ನಾಟಕ ನಗರ ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕವನ್ನು ಅಧಿವೇಶನದಲ್ಲಿ ಮಂಡಿಸಲು ಅನುಮೋದನೆ ನೀಡಲಾಗಿದೆ ಎಂದರು. ಸ್ವಚ್ಛ ಭಾರತ್ ಮಿಷನ್ 2ನೇ ಹಂತದ ಯೋಜನೆಯಡಿ ಮುಂದಿನ ಐದು ವರ್ಷಕ್ಕೆ 5.5 ಲಕ್ಷ ಮನೆಗಳಿಗೆ ಗೃಹ ಶೌಚಾಲಯ ನಿರ್ಮಾಣ, ಶೇ. 70 ಅನುದಾನ 15 ನೇ ಹಣಕಾಸು ಆಯೋಗದಡಿ ಕೊಡಲು ಸಂಪುಟ ಸಮ್ಮತಿ ನೀಡಿದೆ ಎಂದು ತಿಳಿಸಿದರು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •