ಲಕ್ನೋ: ಕ್ಲಿನಿಕ್‍ಗೆ ಬಂದ ವಿವಾಹಿತ ಮಹಿಳೆಯನ್ನು ಪ್ರೀತಿಸಿ ಆಕೆಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ವೈದ್ಯನೊಬ್ಬನನ್ನು ಬಂಧಿಸಿದ್ದಾರೆ.

ಇಸ್ಮಾಯಿಲ್(33) ಬಂಧಿತ ವೈದ್ಯ. ಸೆಪ್ಟೆಂಬರ್‌ನಲ್ಲಿ ಈತ 4 ಮಕ್ಕಳ ತಾಯಿಯನ್ನು ಕೊಲೆ ಮಾಡಿದ್ದ. ಈಗ ಪೊಲೀಸರು ಈತನ ಮೇಲೆ ವಿವಿಧ ಐಪಿಸಿ ಸೆಕ್ಷನ್‍ಗಳನ್ನು ಹಾಕಿ ಬಂಧಿಸಿದ್ದಾರೆ.

ಪ್ರಕರಣ ಪತ್ತೆಯಾಗಿದ್ದು ಹೇಗೆ?
ಸೆಪ್ಟೆಂಬರ್ 7ರಂದು ಮಹಿಳೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಆಕೆಯ ಪತಿ ಗಾಜಿಯಾಬಾದ್ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಕಾಣೆಯಾದ ಮಹಿಳೆಯ ಫೋಟೋವನ್ನು ಇತರ ಜಿಲ್ಲೆಗಳು ಮತ್ತು ರಾಜ್ಯಗಳ ಪೊಲೀಸ್ ಠಾಣೆಗಳೊಂದಿಗೆ ಹಂಚಿಕೊಂಡು ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಒಂದು ತಿಂಗಳ ಹುಡುಕಾಟದ ನಂತರವೂ ಮಹಿಳೆಯನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ.

ಅಕ್ಟೋಬರ್ 15ರಂದು ಕುರುಕ್ಷೇತ್ರದಲ್ಲಿ ಒಂದು ಅಪರಿಚಿತ ಶವ ಪತ್ತೆಯಾಗಿತ್ತು. ಈ ಶವದ ಮುಖ ಮತ್ತು ನಾಪತ್ತೆಯಾಗಿದ್ದ ಮಹಿಳೆಯ ಫೋಟೋ ಹೋಲಿಕೆಯಾಗುತ್ತದೆ ಎಂದು ಹರ್ಯಾಣ ಪೊಲೀಸರು ಗಾಜಿಯಾಬಾದ್ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಶವ ಪತ್ತೆಯಾದ ಬಳಿಕ ಆಕೆಯ ಫೋನ್ ಕರೆ ಮತ್ತು ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರಿಗೆ ವೈದ್ಯ ಇಸ್ಮಾಯಿಲ್ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

love-with-doctor

 

ಕೊಲೆ ಮಾಡಿದ್ದು ಯಾಕೆ?
ಇಸ್ಮಾಯಿಲ್ ಕ್ಲಿನಿಕ್ ನಡೆಸುತ್ತಿದ್ದು, ಕೆಲ ತಿಂಗಳ ಹಿಂದೆ ಮಹಿಳೆಯೊಬ್ಬಳು ಕ್ಲಿನಿಕ್‍ಗೆ ಚಿಕಿತ್ಸೆಗೆ ಬಂದಿದ್ದಳು. ಈತ ನೀಡಿದ ಚಿಕಿತ್ಸೆಯಿಂದ ಆಕೆ ಗುಣವಾಗಿದ್ದರು. ನಂತರ ಇಬ್ಬರು ಹೆಚ್ಚು ಸ್ನೇಹಿತರಾಗಿದ್ದು ಬಳಿಕ ಈ ಸ್ನೇಹ ಪ್ರೀತಿಗೆ ತಿರುಗಿತ್ತು.

ಇಬ್ಬರು ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ ಇಸ್ಮಾಯಿಲ್ ಸೆಪ್ಟೆಂಬರ್ 7ರಂದು ಮಹಿಳೆಯನ್ನು ಪಹಾರ್‌ಗಂಜ್‌ ಹೋಟೆಲ್‍ಗೆ ದ್ವಿಚಕ್ರವಾಹನದಲ್ಲಿ ಕರೆದೊಕೊಂಡು ಹೋಗಿದ್ದ. ಮರುದಿನ ಕಾರನ್ನು ಬಾಡಿಗೆ ಪಡೆದು ಚಂಡೀಗಢಕ್ಕೆ ಹೋಗುವಾಗ ದಾರಿ ಮಧ್ಯೆ ಇಬ್ಬರ ನಡುವೆ ಜಗಳವಾಗಿದೆ.

ಇಬ್ಬರಿಗೂ ಮದುವೆಯಾಗಿದ್ದರೂ ಮಹಿಳೆ ವೈದ್ಯನ ಬಳಿ ತನ್ನ ಜೊತೆ ವಾಸಿಸುವಂತೆ ಪೀಡಿಸುತ್ತಿದ್ದಳು. ಜಗಳ ಜೋರಾಗುತ್ತಿದ್ದಂತೆ ಅಸ್ತಮಾ ರೋಗಿಯಾಗಿದ್ದ ಮಹಿಳೆಗೆ ಉಸಿರಾಟ ತೊಂದರೆ ಪ್ರಾರಂಭವಾಗಿದೆ. ಹೀಗಾಗಿ ಇಸ್ಮಾಯಿಲ್ ಇಂಜೆಕ್ಷನ್ ಮೂಲಕ ಔಷಧಿ ನೀಡಿದ್ದು, ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಈ ವೇಳೆ ಟವಲ್ ನಿಂದ ಮಹಿಳೆಯನ್ನು ಉಸಿರುಗಟ್ಟಿಸಿ ಕಾರಿನಲ್ಲೇ ಇಸ್ಮಾಯಿಲ್ ಕೊಲೆಗೈದಿದ್ದಾನೆ. ಬಳಿಕ ಆಕೆಯ ಶವವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಮನೆಗೆ ಮರಳಿದ್ದ.

ವಿಚಾರಣೆ ವೇಳೆ ಆಕೆ ತನ್ನನ್ನು ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದಕ್ಕೆ ನಾನು ಕೊಲೆ ಮಾಡಿರುವುದಾಗಿ ಇಸ್ಮಾಯಿಲ್ ಕೃತ್ಯವನ್ನು‌ ಒಪ್ಪಿಕೊಂಡಿದ್ದಾನೆ. ಕೊಲೆ ಮಾಡಿದ ಬಳಿಕ ತನಗೂ ಈ ಕೃತ್ಯಕ್ಕೂ ಯಾವುದೇ ಸಂಬಂಧ ಇಲ್ಲದಂತೆ ಯಾರಿಗೂ ಅನುಮಾನ ಬಾರದಂತೆ ಕ್ಲಿನಿಕ್‌ ನಡೆಸುತ್ತಿದ್ದ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •