ಹೈದರಾಬಾದ್: ಓದಿಲ್ಲದೇ ನಾನು ಬದುಕಲಾರೆ, ಅಪ್ಪ-ಅಮ್ಮ ಕ್ಷಮಿಸಿ ಎಂದು ಡೆತ್ ನೋಟ್ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಧ್‍ನಗರದಲ್ಲಿ ನಡೆದಿದೆ.

ನವೆಂಬರ್ 2ರಂದು 19 ವರ್ಷದ ಐಶ್ವರ್ಯಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಆತ್ಮಹತ್ಯೆಗೆ ಮುನ್ನ ಐಶ್ವರ್ಯಾ ಡೆತ್ ನೋಟ್ ಬರೆದು, ತನ್ನ ಈ ನಿರ್ಧಾರಕ್ಕೆ ಬಡತನವೇ ಕಾರಣ ಎಂಬುದನ್ನ ಪರೋಕ್ಷವಾಗಿ ಹೇಳಿದ್ದಾಳೆ. ನನ್ನ ಸಾವಿಗೆ ಯಾರು ಕಾರಣರಲ್ಲ. ನನ್ನಿಂದಾಗಿ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಇನ್ನು ನಾನು ಓದದೇ ಬದುಕಲಾರೆ. ಈ ಸಮಸ್ಯೆಗೆ ಆತ್ಮಹತ್ಯೆಯೇ ಪರಿಹಾರ ಎಂದು ಅನ್ನಿಸುತ್ತಿದೆ. ನಾನು ನಿಮಗೆ ಒಳ್ಳೆಯ ಮಗಳು ಆಗಲು ಸಾಧ್ಯವಾಗಲಿಲ್ಲ. ಅಪ್ಪ-ಅಮ್ಮ ದಯವಿಟ್ಟು ಕ್ಷಮಿಸಿ ಎಂದು ಐಶ್ವರ್ಯಾ ಪತ್ರದಲ್ಲಿ ಬರೆದಿದ್ದಾಳೆ.

IAS-dream

ಐಶ್ವರ್ಯಾಳ ತಂಗಿ ಏಳನೇ ಕ್ಲಾಸ್ ನಲ್ಲಿ ಓದುತ್ತಿದ್ದಾಳೆ. ಲಾಕ್‍ಡೌನ್ ನಿಂದಾಗಿ ಐಶ್ವರ್ಯಾ ಕುಟುಂಬ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿತ್ತು. 12ನೇ ತರಗತಿಯಲ್ಲಿ ಶೇ.98.5 ಅಂಕ ಗಳಿಸಿದ್ದ ಐಶ್ವರ್ಯಾ ಮೆರಿಟ್ ಆಧಾರದ ಮೇಲೆ ದೆಹಲಿಯ ಲೇಡಿ ಶ್ರೀರಾಮ ಕಾಲೇಜಿನಲ್ಲಿ ಭರ್ತಿ ಪಡೆದಿದ್ದಳು. ತಂದೆ ಮೋಟರ್ ಸೈಕಲ್ ಮೆಕಾನಿಕ್ ಆಗಿದ್ದು, ತಾಯಿ ಮನೆಯಲ್ಲಿಯೇ ಟೈಲರಿಂಗ್ ಮಾಡುತ್ತಿದ್ದರು. ಇಬ್ಬರ ಸಂಪಾದನೆಯಿಂದ ಇಡೀ ಕುಟುಂಬದ ದೋಣಿ ಸಾಗುತ್ತಿತ್ತು. ಲಾಕ್‍ಡೌನ್ ಬಿರುಗಾಳಿಗೆ ಸಿಲುಕಿದ್ದ ದೋಣಿಯ ಪಯಣ ದಿಕ್ಕು ತಪ್ಪಿತ್ತು. ಹಾಗಾಗಿ ಐಶ್ವರ್ಯಾ ಮುಂದಿನ ವಿದ್ಯಾಭ್ಯಾಸ ಪ್ರಶ್ನಾರ್ಥಕವಾಗಿತ್ತು.

ರಜೆ ಹಿನ್ನೆಲೆ ಫೆಬ್ರವರಿಯಲ್ಲಿ ಐಶ್ವರ್ಯಾ ಊರಿಗೆ ಬಂದಿದ್ದಳು. ತದನಂತರ ಲಾಕ್‍ಡೌನ್ ನಿಂದಾಗಿ ಗ್ರಾಮದಲ್ಲಿಯೇ ಉಳಿದುಕೊಂಡಿದ್ದಳು. ಕೆಲ ದಿನಗಳ ಹಿಂದೆ ಶಿಷ್ಯವೇತನ 80 ಸಾವಿರ ಸಿಗಲಿದೆ ಎಂದು ಮಗಳು ಹೇಳಿದ್ದಳು. ಆದ್ರೆ ಕೊರೊನಾದಿಂದಾಗಿ ಹಣ ಜಮೆ ಆಗಿರಲಿಲ್ಲ. ಬಿಎಸ್‍ಸಿ ಯಲ್ಲಿ ಗಣಿತ ವಿಷಯ ಆಯ್ಕೆ ಮಾಡಿಕೊಂಡಿದ್ದ ಐಶ್ವರ್ಯಾಗೆ ಮೊಬೈಲಿನಲ್ಲಿ ಆನ್‍ಲೈನ್ ಕ್ಲಾಸ್ ಸರಿಯಾಗುತ್ತಿರಲಿಲ್ಲ ಎಂದು ಐಶ್ವರ್ಯಾ ತಂದೆ ಶ್ರೀನಿವಾಸ್ ರೆಡ್ಡಿ ಹೇಳುತ್ತಾರೆ.

ದೆಹಲಿಯಲ್ಲಿ ಸೀಟ್ ಸಿಕ್ಕಾಗ ಇದ್ದ ಮನೆಯನ್ನ ಅಡವಿಟ್ಟು 2 ಲಕ್ಷ ರೂ. ಸಾಲ ಪಡೆದು ಮಗಳನ್ನ ಕಾಲೇಜಿಗೆ ಕಳುಹಿಸಿದೆ. ಇನ್ನೂ ಆ ಸಾಲಕ್ಕೆ ಬಡ್ಡಿ ಪಾವತಿಸುತ್ತಿದ್ದೇನೆ. ಆನ್‍ಲೈನ್ ಕ್ಲಾಸ್ ಗಾಗಿ ಸೆಕೆಂಡ್ ಹ್ಯಾಂಡ್ ಲ್ಯಾಪ್‍ಟಾಪ್ ಕೊಡಿಸುವಂತೆ ಮಗಳು ಹೇಳಿದ್ದಳು. ಸ್ವಲ್ಪ ದಿನಗಳ ನಂತರ ಕೊಡಿಸುವೆ ಎಂದು ಹೇಳಿದ್ದೆ. ಆದ್ರೆ ಮತ್ತೆ ಯಾವತ್ತು ಐಶ್ವರ್ಯಾ ಲ್ಯಾಪ್‍ಟ್ಯಾಪ್ ಕೇಳಿರಲಿಲ್ಲ. ಪದವಿ ಬಳಿಕ ಐಎಎಸ್ ಆಗಬೇಕೆಂದ ಕನಸು ಕಂಡಿದ್ದಳು ಎಂದು ತಂದೆ ಕಣ್ಣೀರು ಹಾಕುತ್ತಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •