ರಾಜ್ಯದಲ್ಲಿ ಕೊರೊನಾ ೨ನೇ ಅಲೆಯಿಂದಾಗಿ ಸಾಕಷ್ಟು ಸಮಸ್ಯೆಯನ್ನು ಎದುರಿಸುವಂತಾಗಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಸೋಂಕಿತರು ಆಕ್ಸಿಜನ್, ಬೆಡ್ ಕೊರತೆಯಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ ಕೊರೊನಾವನ್ನು ಕಟ್ಟಿಹಾಕಲು ರಾಜ್ಯ ಸರ್ಕಾರ ಲಾಕ್‌ಡೌನ್ ಅಸ್ತ್ರವನ್ನು ಕೊನೆಯದಾಗಿ ಪ್ರಯೋಗ ಮಾಡಿದೆ. ಇದರಿಂದ ಕೊರೊನಾ ನಿಯಂತ್ರಣ ಮಾಡುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಕೊರೊನಾ ಹರಡುವ ಚೈನ್ ಲಿಂಕ್ ಅನ್ನು ಕಟ್ ಮಾಡುವ ಉದ್ದೇಶವನ್ನು ಹೊಂದಿದೆ.

 

 

ರಾಜ್ಯದಲ್ಲಿ ಲಾಕ್‌ಡೌನ್‌ ಹೇರಿರುವುದರಿಂದ ಸಾಕಷ್ಟು ಬಡ ಜನರಿಗೆ ತೊಂದರೆ ಆಗಿರುವುದು ಮಾತ್ರ ಸುಳ್ಳಲ್ಲ. ದಿನಗೂಲಿ ಮಾಡಿ ಬಂದ ಹಣದಲ್ಲಿ ಜೀವನ ಸಾಗಿಸುತ್ತಿರುವ ಅದೆಷ್ಟೋ ಕುಟುಂಬಗಳು ನಮ್ಮ ಮುಂದೆ ಇದೆ. ಅಲ್ಲದೇ, ಬಡ ಕಾರ್ಮಿಕರು, ನಿರಾಶ್ರಿತರ ಸಂಖ್ಯೆಯೇ ನಮ್ಮ ರಾಜ್ಯದಲ್ಲಿ ಕಡಿಮೆ ಇಲ್ಲ. ಇವರೆಲ್ಲರೂ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಹಾಗಾಗಿ ಸ್ಯಾಂಡಲ್ ವುಡ್ ಸೇರಿದಂತೆ ನಾನಾ ಸೆಲೆಬ್ರಿಟಿಗಳು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುವ ನಿಟ್ಟಿನಲ್ಲಿ ತಮ್ಮ ಕೈ ಜೋಡಿಸಿದ್ದಾರೆ. ನಟಿ ರಾಗಿಣಿ ಸ್ಮಶಾನದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಸಾಮಗ್ರಿಯನ್ನು ವಿತರಣೆ ಮಾಡಿದರೆ, ನಟಿ ರಾಧಿಕಾ ಕುಮಾರಸ್ವಾಮಿ ಅವರು ಬೆಂಗಳೂರಿನ ಹೊರವಲಯದಲ್ಲಿರುವ ಮಂಗಳಮುಖಿಯರಿಗೆ ಆಹಾರ ಸಾಮಗ್ರಿಗಳನ್ನು ಒದಗಿಸಿದ್ದಾರೆ.

 

 

ಹೀಗೆ ಸಾಕಷ್ಟು ನಟ ನಟಿಯರು ತಮ್ಮ ಕೈಲಾದಷ್ಟು ಸಹಾಯವನ್ನು ಸಮಾಜಕ್ಕೆ ಮಾಡುತ್ತಿದ್ದಾರೆ. ಇದೀಗ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಅವರು ಜೊತೆಯಾಗಿ ಭುವನಂ ಚಿತ್ರತಂಡದ ಮೂಲಕ ಕಷ್ಟದಲ್ಲಿರುವವರಿಗೆ ಆಹಾರ ಕಿಟ್‌ಗಳನ್ನು ಹಂಚುತ್ತಿದ್ದಾರೆ. ಪ್ರಸ್ತುತ ಬೆಂಗಳೂರು ಗ್ರಾಮೀಣ ಭಾಗದ ಹೊಸಕೋಟೆಯಲ್ಲಿ ವಾಸ ಮಾಡುತ್ತಿರುವ 150 ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ವಿರತಣೆ ಮಾಡಿದ್ದಾರೆ.

 

ವಿತರಣೆ ಮಾಡಿರುವ ಆಹಾರ ಕಿಟ್‌ನಲ್ಲಿ ಅಕ್ಕಿ, ಬೇಳೆ, ಸಕ್ಕರೆ, ಅಡುಗೆ ಎಣ್ಣೆ, ಗೋಧಿ ಹಿಟ್ಟು, ಮಸಾಲಾ ಪದಾರ್ಥಗಳು ಹಾಗೂ ತರಕಾರಿಗಳನ್ನು ನೀಡಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •