ರಾಷ್ಟ್ರ ರಾಜಧಾನಿಯಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಈ ವಾರದ ಆರಂಭದಲ್ಲಿ ದೃಡ ಪಟ್ಟ ನಂತರ ಮೂರೂ ದೆಹಲಿ ಮಹಾನಗರ ಪಾಲಿಕೆಗಳು ಆಯಾ ಪ್ರದೇಶಗಳಲ್ಲಿ ಕೋಳಿ ಮಾರಾಟವನ್ನು ನಿಷೇಧಿಸಿವೆ.  ಮೊಟ್ಟೆ ಆಧಾರಿತ ಭಕ್ಷ್ಯಗಳು ಅಥವಾ ಕೋಳಿ ಮಾಂಸಾಹಾರದ ವಿರುದ್ಧ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಲಾಗಿದೆ.

ಉತ್ತರ ಮತ್ತು ದಕ್ಷಿಣ ದೆಹಲಿ ಮಹಾನಗರ ಪಾಲಿಕೆಗಳು ಇಂದು ಮಧ್ಯಾಹ್ನ ತಮ್ಮ ಆದೇಶವನ್ನು ಹೊರಡಿಸಿದ್ದು, ಪೂರ್ವ ದೆಹಲಿ ತನ್ನ ಆದೇಶವನ್ನು ಸಂಜೆ ಹೊರಡಿಸಿದೆ.

“ಎನ್‌ಡಿಎಂಸಿ ವ್ಯಾಪ್ತಿಯ ಪ್ರದೇಶಗಳಲ್ಲಿನ ಎಲ್ಲಾ ಮಾಂಸ ಮತ್ತು ಕೋಳಿ ಅಂಗಡಿಗಳು ಹಾಗೂ ಮಾಂಸ ಸಂಸ್ಕರಣಾ ಘಟಕಗಳು ಮುಂದಿನ ಆದೇಶದವರೆಗೆ ಕೋಳಿ ಮಾಂಸವನ್ನು ಮಾರಾಟ ಮಾಡುವ ನಿಷೇಧ ಆದೇಶ ತಕ್ಷಣದಿಂದ  ಜಾರಿಗೆ ಬರುತ್ತದೆ ” ಎಂದು ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಪ್ರಕಟನೆಯಲ್ಲಿ ತಿಳಿಸಿದೆ.

Government

“ಎಲ್ಲಾ ರೆಸ್ಟೋರೆಂಟ್ ಮಾಲೀಕರಿಗೆ ಕೋಳಿ ಮಾಂಸ, ಕೋಳಿ ಉತ್ಪನ್ನ ಅಥವಾ ಮೊಟ್ಟೆಗೆ ಸಂಬಂಧಿಸಿದ ಯಾವುದೇ ಭಕ್ಷ್ಯಗಳನ್ನು ನೀಡದಂತೆ ನಿರ್ದೇಶಿಸಲಾಗಿದೆ … ತಪ್ಪಿದ್ದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು” ಎಂದು ಆದೇಶದಲ್ಲಿ ತಿಳಿಸಲಾಗಿದೆ.

“ಯಾರು ಆದೇಶವನ್ನು ಪಾಲಿಸುವುದಿಲ್ಲ, ಅವರ ವ್ಯಾಪಾರ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ” ಎಂದು ಎಸ್‌ಡಿಎಂಸಿ ತನ್ನ ಆದೇಶದಲ್ಲಿ ಹೇಳಿದೆ.

ಅರ್ಧ ಬೇಯಿಸಿದ ಕೋಳಿ ಹಾಗೂ ಅರ್ಧ ಬೇಯಿಸಿದ ಮೊಟ್ಟೆಗಳನ್ನು ಸೇವಿಸಬಾರದು. ಈ ಸಾಂಕ್ರಾಮಿಕ ರೋಗದ ವಿಚಾರದಲ್ಲಿ ಭಯಪಡದೆ ಸೂಚಿಸಿದ ನಿಯಮಗಳನ್ನು ಪಾಲಿಸಿ ಎಂದು ಆರೋಗ್ಯ ಇಲಾಖೆ ಪ್ರಕಟನೆ ಹೊರಡಿಸಿದೆ.

70 ಡಿಗ್ರಿ ಸೆಲ್ಸಿಯಸ್‌ನಲ್ಲಿ 30 ನಿಮಿಷಗಳ ಸಂಪೂರ್ಣವಾಗಿ ಬೇಯಿಸಿದ ಮೊಟ್ಟೆ ಅಥವಾ ಕೋಳಿ ಉತ್ಪನ್ನಗಳನ್ನು ಸೇವಿಸಿ. ಎಂದು ಇಲಾಖೆ ಹೇಳಿದೆ. ಕೇರಳ, ರಾಜಸ್ಥಾನ, ಹಿಮಾಚಲ ಪ್ರದೇಶ, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲೂ ಹಕ್ಕಿ ಜ್ವರದ ಪ್ರಕರಣಗಳು ಅಧಿಕೃತವಾಗಿ ದೃಡ ಪಟ್ಟಿದೆ.

ಕೇರಳದಲ್ಲಿ, ಕಳೆದ ವಾರ 12,000 ಬಾತುಕೋಳಿಗಳು ಸಾವನ್ನಪ್ಪಿದ ನಂತರ ಸಾವಿರಾರು ಕೋಳಿಗಳನ್ನು ಕೊಲ್ಲಲಾಗಿದೆ. ಹರಿಯಾಣದ ಪಂಚಕುಲ ಜಿಲ್ಲೆಯ ಐದು ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ 1.6 ಲಕ್ಷಕ್ಕೂ ಹೆಚ್ಚು ಪಕ್ಷಿಗಳನ್ನು ಕೊಲ್ಲುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ. ಕಳೆದ ಎರಡು-ಮೂರು ವಾರಗಳಲ್ಲಿ ರಾಜ್ಯಾದ್ಯಂತ ನಾಲ್ಕು ಲಕ್ಷಕ್ಕೂ ಹೆಚ್ಚು ಪಕ್ಷಿಗಳು ಸಾವನ್ನಪ್ಪಿತ್ತು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •