ತನ್ನ ರೋಗಿಗಳಿಗೆ ಕೇವಲ 10 ರೂ. ಶುಲ್ಕ ವಿಧಿಸುವ ಯುವ ವೈದ್ಯೆ…

Home

ಖಾಸಗಿ ಆಸ್ಪತ್ರೆಗಳು ವಿಧಿಸುವ ದುಬಾರಿ ಶುಲ್ಕದಿಂದ ಅಲ್ಲಿಗೆ ತೆರಳಲು ಬಡವರು ಭಯ ಪಡುವಂತಹ ಇಂದಿನ ದಿನಗಳಲ್ಲಿ ತಮ್ಮ ರೋಗಿಗಳಿಗೆ ಕೇವಲ 10 ರೂ. ಶುಲ್ಕ ವಿಧಿಸುವ ಆಂಧ್ರ ಪ್ರದೇಶದ ಯುವ ವೈದ್ಯೆಯೊಬ್ಬರು ತಮ್ಮ ಮಾನವೀಯ ಅಂತಃಕರಣದಿಂದ ಎಲ್ಲರ ಗಮನ ಸೆಳೆದಿದ್ದಾರೆ.

ಕಡಪ್ಪ ಜಿಲ್ಲೆಯ  ಖಾಸಗಿ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಕೋರ್ಸ್  ಮಾಡಿರುವ ಡಾ.ನೂರಿ ಪರ್ವೀನ್ ಯಾವುದೇ ಬಡ ಕುಟುಂಬ ಆರೋಗ್ಯ ಸೇವೆಯಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಅತ್ಯಂತ ಕನಿಷ್ಠ ಶುಲ್ಕವನ್ನು ತಮ್ಮ ರೋಗಿಗಳಿಂದ ಸಂಗ್ರಹಿಸುತ್ತಾರೆ. ವಿಜಯವಾಡದ ಮಧ್ಯಮವರ್ಗ ಕುಟುಂಬವೊಂದರಿಂದ  ಬಂದಿರುವ ಡಾ.ಪರ್ವೀನ್ ಮೆರಿಟ್ ಆಧಾರದಲ್ಲಿ ಮೆಡಿಕಲ್ ಸೀಟು ಪಡೆದು ಇದೀಗ ವೈದ್ಯೆಯಾಗಿ ಬಡವರ ಸೇವೆಗೆ ತಮ್ಮ ಜೀವನ ಮುಡಿಪಾಗಿಸಿದ್ದಾರೆ.

“ಬಡವರಿಗೆ ಸಹಾಯ ಮಾಡಲೆಂದೇ ಕಡಪ್ಪಾದಲ್ಲಿ ಹೆಚ್ಚಾಗಿ ಬಡ ಜನರೇ ವಾಸಿಸುವ ಸ್ಥಳದಲ್ಲಿ ನಾನು ಉದ್ದೇಶಪೂರ್ವಕವಾಗಿ ನನ್ನ ಕ್ಲಿನಿಕ್ ತೆರೆದಿದ್ದೇನೆ. ನನ್ನ ಹೆತ್ತವರಿಗೆ ಕೂಡ ಹೇಳದೆ ಇಲ್ಲಿ ಕ್ಲಿನಿಕ್ ಆರಂಭಿಸಿದೆ. ಈಗ ಅವರು ನನ್ನ ಉದ್ದೇಶ ತಿಳಿದು ಸಂತಸ ಪಟ್ಟಿದ್ದಾರೆ ಹಾಗೂ ನನ್ನನ್ನು ಆಶೀರ್ವದಿಸಿದ್ದಾರೆ,” ಎಂದು ಡಾ ಪರ್ವೀನ್ ಹೇಳುತ್ತಾರೆ.

Mother Theresa Of Kadapa': Meet Dr Noori Parveen Who Treats Patients At Rs  10

“ನನ್ನ ಹೆತ್ತವರಿಂದ ನಾನು ಇಂತಹ ಸೇವೆ ಸಲ್ಲಿಸಲು ಸ್ಫೂರ್ತಿ ಪಡೆದಿದ್ದೇನೆ. ಸಮಾಜ ಸೇವೆಯ ಬಗ್ಗೆ ಅವರೇ ನನ್ನಲ್ಲಿ ಆಸಕ್ತಿ ಮೂಡಿಸಿದ್ದರು. ಮೂವರು ಅನಾಥರನ್ನು ದತ್ತು ಪಡೆದು ಅವರ ಶಿಕ್ಷಣದ ಜವಾಬ್ದಾರಿ ವಹಿಸುವ ಮೂಲಕ ಅವರು ಮಾದರಿಯಾಗಿದ್ದಾರೆ” ಎಂದು ಅವರು ವಿವರಿಸುತ್ತಾರೆ.

ಹೊರರೋಗಿಗಳಿಂದ ರೂ 10 ಪಡೆಯುವ ಡಾ ಪರ್ವೀನ್, ಒಳರೋಗಿಗಳಿಗೆ ಕೇವಲ ರೂ 50 ಶುಲ್ಕ ವಿಧಿಸುತ್ತಾರೆ. ಪ್ರತಿ ದಿನ ಅವರ ಕ್ಲಿನಿಕ್‍ಗೆ ಸುಮಾರು 40 ರೋಗಿಗಳು ಆಗಮಿಸುತ್ತಾರೆ. ಕಡಪ್ಪಾದಲ್ಲಿ ಸಾಮಾನ್ಯವಾಗಿ ಖಾಸಗಿ ವೈದ್ಯರು ವಿಧಿಸುವ ಕನ್ಸಲ್ಟೇಶನ್ ಶುಲ್ಕ ರೂ 150ರಿಂದ ರೂ 200 ಆಗಿರುವಾಗ ಈ 10 ರೂ. ಡಾಕ್ಟರ್  ಬಡವರ ಆಶಾಕಿರಣವಾಗಿದ್ದಾರೆ ಹಾಗೂ ಎಲ್ಲರಿಂದ ಶ್ಲಾಘನೆ ಪಡೆದಿದ್ದಾರೆ.

ಆಕೆ ಎರಡು ಸಂಘಟನೆಗಳನ್ನೂ ಸ್ಥಾಪಿಸಿದ್ದಾರೆ. ‘ಇನ್‍ಸ್ಪೈರಿಂಗ್ ಹೆಲ್ತಿ ಯಂಗ್ ಇಂಡಿಯಾ’ ಸಂಘಟನೆ ಮೂಲಕ ಮಕ್ಕಳು ಹಾಗೂ ಯುವಜನತೆಯಲ್ಲಿ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದರೆ ಆಕೆಯ ಅಜ್ಜನ ಸ್ಮರಣಾರ್ಥ ರಚಿಸಲಾಗಿರುವ ‘ನೂರ್ ಚ್ಯಾರಿಟೇಬಲ್ ಟ್ರಸ್ಟ್’ ಮೂಲಕ ಸಮಾಜಸೇವೆಯನ್ನು ಡಾ.ಪರ್ವೀನ್ ನಡೆಸುತ್ತಾರೆ. ಇದೇ ಟ್ರಸ್ಟ್ ಮುಖಾಂತರ ಆಕೆ ಕೋವಿಡ್ ಲಾಕ್ ಡೌನ್ ಸಂದರ್ಭ ಬಡವರಿಗೆ  ಆಹಾರ ಒದಗಿಸುವ ಯೋಜನೆಯನ್ನೂ ಹಮ್ಮಿಕೊಂಡಿದ್ದರು.

Kadapa doctor offers check-ups for ₹10 - The Hindu

ತಮ್ಮ ಬಳಿ ಬರುವ ಹೆಚ್ಚಿನ ರೋಗಿಗಳು ದುರ್ಬಲರು ಹಾಗೂ ಅಪೌಷ್ಠಿಕಾಂಶತೆಯಿಂದ ಬಳಲುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ಮುಂದೆ ಮನಃಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದು ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಿ ವಿಶೇಷವಾಗಿ ಬಡವರಿಗೆ ಉತ್ತಮ ಆರೋಗ್ಯ ಸೇವಾ ಸೌಲಭ್ಯವನ್ನು ಒದಗಿಸುವಂತೆ ಮಾಡುವುದು ಡಾ ಪರ್ವೀನ್ ಅವರ ಗುರಿಯಾಗಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...