ಲಕ್ನೋ: ಹತ್ರಾಸ್ ಅತ್ಯಾಚಾರ ಪ್ರಕರಣದ ತನಿಖಾಧಿಕಾರಿ ಡಿಐಜಿ ಚಂದ್ರಪ್ರಕಾಶ್ ಅವರ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಬೆಳಗ್ಗೆ ಸುಮಾರು 10 ರಿಂದ 11 ಗಂಟೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಡಿಐಜಿ ಚಂದ್ರಪ್ರಕಾಶ್ ಹತ್ರಾಸ್ ಪ್ರಕರಣದ ತನಿಖೆ ನಡೆಸುತ್ತಿರುವ ತಂಡದಲ್ಲಿದ್ದರು.
36 ವರ್ಷದ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಮಹಿಳೆಯ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಮೊದಲಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಮರಣೋತ್ತರ ಶವ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು ಕುಟುಂಬಸ್ಥರು ಮತ್ತು ಡಿಐಜಿ ಚಂದ್ರ ಪ್ರಕಾಶ್ ಆಸ್ಪತ್ರೆಯಲ್ಲಿದ್ದಾರೆ. ಪತ್ನಿ ಆತ್ಮಹತ್ಯೆಯ ಬಗ್ಗೆ ಚಂದ್ರಪ್ರಕಾಶ್ ಹೇಳಿಕೆ ನೀಡಲು ಹಿಂದೇಟು ಹಾಕಿದ್ದಾರೆ.
ಪುಷ್ಮಾ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ವೇಳೆ ಮನೆಯಲ್ಲಿ ಚಂದ್ರ ಪ್ರಕಾಶ್ ಇರಲಿಲ್ಲ. ಮನೆಯ ಹಿಂದಿನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ವಿಷಯವನ್ನ ಚಂದ್ರ ಪ್ರಕಾಶ್ ಅವರಿಗೆ ಮಕ್ಕಳು ತಿಳಿಸಿದ್ದಾರೆ ಎಂದು ಜಾಯಿಂಟ್ ಸಿಪಿ ನವೀನ್ ಆರೋರಾ ತಿಳಿಸಿದ್ದಾರೆ.
ಚಂದ್ರಪ್ರಕಾಶ್ ಉನ್ನಾವ್ ಜಿಲ್ಲೆಯ ಪೊಲೀಸ್ ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಲಕ್ನೋನಲ್ಲಿ ಕುಟುಂಬದ ಜೊತೆ ವಾಸವಾಗಿದ್ದರು. ಚಂದ್ರ ಪ್ರಕಾಶ್ ಹತ್ರಾಸ್ ಪ್ರಕರಣದ ತನಿಖೆ ಆರಂಭಿಸಿರುವ ಎಸ್ಐಟಿ ತಂಡದಲ್ಲಿದ್ದರು.