ನೀವು ಗರ್ಭಿಣಿಯಾಗಿದ್ದಾಗ, ಹುಟ್ಟಲಿರುವ ಮಗು ಗಂಡೋ ಹೆಣ್ಣೋ ಎಂಬ ಕುತೂಹಲ ನಿಮಗಿಂತಲೂ ನಿಮ್ಮ ಕುಟುಂಬದವರಿಗೇ ಹೆಚ್ಚಾಗಿರುತ್ತದೆ. ಈ ಕುತೂಹಲವೇ ಹಲವಾರು ತಲೆಮಾರುಗಳಿಂದ, ಯಾವ ಮಗು ಆಗಲಿದೆ ಎಂಬುದನು ಊಹಿಸುವ ಬಗ್ಗೆ ಹಲವಾರು ಕ್ರಮ, ಕಥೆಗಳು ಮತ್ತು ಊಹಾಪೋಹಗಳನ್ನು ಹುಟ್ಟುಹಾಕಿದೆ.
ಇವುಗಳಲ್ಲಿ ಒಂದೆರಡು ತಮಾಷೆ ಎನಿಸಿದರೂ, ಇವುಗಳನ್ನು ವೈಜ್ಞಾನಿಕವಾಗಿ ಸಾಬೀತುಪಡಿಸದ ಕಾರಣ ಅವುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ. ಆದರೆ ಹಿರಿಯರ ಅನುಭವದ ಪ್ರಕಾರ ನಡೆದು ಬಂದಿರುವ ಕೆಲವು ಕ್ರಮಗಳನ್ನು ಮಾತ್ರ ಅಲ್ಲಗಳೆಯಲು ಸಾಧ್ಯವೇ ಇಲ್ಲದಷ್ಟು ನಿಖರವಾಗಿ ಹೇಳಲಾಗುತ್ತದೆ. ಇಂದಿನ ಲೇಖನದಲ್ಲಿ ಇಂತಹ ಕೆಲವು ಕ್ರಮಗಳ ಬಗ್ಗೆ ವಿವರಗಳನ್ನು ನೀಡಲಾಗಿದೆ.
ಮಗುವಿನ ಲಿಂಗವನ್ನು ಯಾವ ಅಂಶ ನಿರ್ಧರಿಸುತ್ತದೆ? ಫಲೀಕರಣದ ಸಮಯದಲ್ಲಿ (ವೀರ್ಯಾಣು ಮತ್ತು ಅಂಡಾಣು ಮಿಲನಗೊಂಡಾಗ) ಮಗುವಿನ ಲಿಂಗವು ಈ ಮೊದಲ ಜೀವಕೋಶದ ಅದರ ವರ್ಣತಂತುವಿನ ಜೋಡಿಯ ಮೂಲಕ ನಿರ್ಧರಿಸಲಾಗುತ್ತದೆ. ಭ್ರೂಣವು (ಅಥವಾ ಮಗು) ಪ್ರತಿಯೊಬ್ಬ ಪೋಷಕರಿಂದಲು 23 ವರ್ಣತಂತುಗಳನ್ನು ಪಡೆಯುತ್ತದೆ, ಅಲ್ಲಿ ಒಂದು ಜೋಡಿ ಮಗುವಿನ ಲೈಂಗಿಕತೆಯನ್ನು ನಿರ್ಧರಿಸುವ ಲೈಂಗಿಕ ವರ್ಣತಂತುಗಳಿಂದ ಕೂಡಿದೆ. ಮಗುವಿಗೆ ಎರಡು ಎಕ್ಸ್ ಕ್ರೋಮೋಸೋಮ್‌ಗಳಿದ್ದರೆ,
ಅದು ಹೆಣ್ಣು ಮಗು ಮತ್ತು ಅದು ಒಂದು ಎಕ್ಸ್ ಮತ್ತು ಒಂದು ವೈ ಕ್ರೋಮೋಸೋಮ್‌ಗಳನ್ನು ಹೊಂದಿದ್ದರೆ, ಅದು ಹುಡುಗ. ಅಂಡಾಣುವಿನಲ್ಲಿ ಸದಾ ಎಕ್ಸ್ ಕ್ರೋಮೋಸೋಮ್ ಇರುತ್ತವೆ ಮತ್ತು ವೀರ್ಯಾಣುವಿನಲ್ಲಿಯೇ ಎಕ್ಸ್ ಮತ್ತು ವೈ ಕ್ರೋಮೋಸೋಮ್ ಗಳಿದ್ದು ಇವುಗಳಲ್ಲಿ ಯಾವ ಕ್ರೋಮೋಸೋಮ್ ಫಲಿತಗೊಂಡಿತೋ ಅದೇ ಲಿಂಗವನ್ನೂ ನಿರ್ಧರಿಸುತ್ತದೆ. ಆ ಪ್ರಕಾರ ಪುರುಷನ ವೀರ್ಯಾಣುವೇ ಲಿಂಗಕ್ಕೂ ಕಾರಣ ಎಂದು ಸ್ಪಷ್ಟವಾಗಿ ಹೇಳಬಹುದು. ಗರ್ಭಧಾರಣೆಯ ಏಳನೇ ವಾರದಲ್ಲಿ ಲೈಂಗಿಕ ವ್ಯತ್ಯಾಸಗಳು ಪ್ರಾರಂಭವಾಗುತ್ತವೆ, ಮತ್ತು ಅವು ಆನುವಂಶಿಕ ಮತ್ತು ಪರಿಸರ ಅಂಶಗಳಿಂದಲೂ ಪ್ರಭಾವಿತವಾಗಿರುತ್ತದೆ.
ಗರ್ಭದಲ್ಲಿರುವ ಮಗು ಗಂಡು ಎನ್ನುವ ಸೂಚನೆಗಳು: ವಾಸ್ತವ V/S ಮಿಥ್ಯೆಗಳು ಇಂದಿನ ಲೇಖನದಲ್ಲಿ, ಗಂಡುಮಗುವಿನ ಸೂಚಕವೆಂದು ಜನರು ಸಾಮಾನ್ಯವಾಗಿ ನಂಬುವ ಕೆಲವು ಸಾಮಾನ್ಯ ಲಕ್ಷಣಗಳು ಅಥವಾ ಚಿಹ್ನೆಗಳನ್ನು ವಿವರಿಸಲಾಗಿದೆ. ಇವುಗಳಲ್ಲಿ ಎಷ್ಟು ಸತ್ಯವಿದೆ ಎಂಬುದನ್ನೂ ನೋಡೋಣ: 1. ಬೆಳಿಗ್ಗಿನ ವಾಕರಿಕೆ ಮಿಥ್ಯೆ: ನೀವು ಬೆಳಿಗ್ಗೆದ್ದಾಗ ಬೆಳಿಗ್ಗಿನ ವಾಕರಿಕೆ ಅಥವಾ ವಾಂತಿ ಬರುವ ಅನುಭವ ನಿಮಗೆ ಆಗದೇ ಇದ್ದರೆ, ನೀವು ಗಂಡು ಮಗುವನ್ನು ಹೊತ್ತುಕೊಂಡಿದ್ದೀರಿ ಎಂಬುದಾಗಿ ಹಿರಿಯರು ಊಹಿಸುತ್ತಾರೆ. ವಾಸ್ತವ: ಬೆಳಿಗ್ಗಿನ ವಾಕರಿಕೆ (ವಾಕರಿಕೆ ಮತ್ತು ವಾಂತಿ) ಗರ್ಭಧಾರಣೆಯ ಸಾಮಾನ್ಯ ಲಕ್ಷಣವಾಗಿದ್ದು, ಗರ್ಭಿಣಿ ಮಹಿಳೆಯರಲ್ಲಿ 70% ಮತ್ತು 80% ರಷ್ಟು ಪರಿಣಾಮ ಬೀರುತ್ತದೆ. ಇದು ಹೆಚ್ಚಾಗಿ ಮೊದಲ ತ್ರೈಮಾಸಿಕಕ್ಕೆ ಸೀಮಿತವಾಗಿದೆ, ಆದರೆ ಕೆಲವು ಮಹಿಳೆಯರು ಹೆರಿಗೆಯ ತನಕವೂ ಅದನ್ನು ಅನುಭವಿಸಬಹುದು. ಹಾರ್ಮೋನುಗಳ ಬದಲಾವಣೆಗಳು ಇದಕ್ಕೆ ಕಾರಣವೆಂದು ನಂಬಲಾಗಿದೆ, ಮತ್ತು ಮಗುವಿನ ಲಿಂಗವಂತೂ ಖಂಡಿತಾ ಅಲ್ಲ.
2. ಹೃದಯ ಬಡಿತ ಮಿಥ್ಯೆ: ನಿಮ್ಮ ಮಗುವಿನ ಹೃದಯ ಬಡಿತವನ್ನು ನೀವು ಗಮನಿಸಿದಾಗ ಇದು ನಿಮಿಷಕ್ಕೆ 140 ಕ್ಕೂ ಕಡಿಮೆ ಇದ್ದರೆ ಗರ್ಭದಲ್ಲಿರುವುದು ಗಂಡು ಮಗು. ವಾಸ್ತವ: ಇದನ್ನು ಬೆಂಬಲಿಸಲು ಯಾವುದೇ ಪುರಾವೆಯಿಲ್ಲದ ದಾರಿತಪ್ಪಿಸುವ ಸಂಶೋಧನೆಯಾಗಿದೆ. ಗರ್ಭದಲ್ಲಿರುವ ಮಗುವಿನ ಹೃದಯದ ಬಡಿತದ ಬಗ್ಗೆ ನಡೆಸಿದ Gender-Related Differences in Fetal Heart Rate ಎಂಬ ಹೆಸರಿನ ಅಧ್ಯಯನದ ಬಳಿಕ ಮಗುವಿನ ಲಿಂಗಕ್ಕೂ ಹೃದಯದ ಬಡಿತದ ವೇಗಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದೆ. ಮಗು ಯಾವುದೇ ಇರಲಿ, ಹೃದಯದ ಬಡಿತ 120 ರಿಂದ 160 bpm ನಡುವೆ ಇರುತ್ತದೆ. (ಆರಂಭಿಕ ಗರ್ಭಾವಸ್ಥೆಯಲ್ಲಿ 140 ರಿಂದ 160 bpm, ಮತ್ತು ಗರ್ಭಧಾರಣೆಯ ನಂತರದ ಹಂತಗಳಲ್ಲಿ (120 ರಿಂದ 140bpm) ರಷ್ಟು ಕಡಿಮೆಯಾಗುತ್ತದೆ.
3. ತ್ವಚೆ ಮತ್ತು ಕೂದಲ ಸ್ಥಿತಿ ಮಿಥ್ಯೆ: ಗರ್ಭದಲ್ಲಿರುವ ಮಗು ಗಂಡಾಗಿದ್ದರೆ ನಿಮ್ಮ ತ್ವಚೆ ಮೊಡವೆರಹಿತವಾಗಿರುತ್ತದೆ. ಅದೇ ಹೆಣ್ಣು ಮಗು ತಾಯಿಯ ಸೌಂದರ್ಯವನ್ನು ಎರವಲು ಪಡೆದುಕೊಳ್ಳುವ ಮೂಲಕ ತ್ವಚೆ ಕಳೆಗುಂದುತ್ತದೆ. ಗಂಡು ಮಗುವಿನ ತಾಯಿಯ ಕೂದಲು ನೀಳ ಮತ್ತು ಹೊಳಪುಳ್ಳದ್ದಾಗಿರುತ್ತದೆ. ವಾಸ್ತವ: ಈ ಮಾಹಿತಿಯನ್ನು ದೃಢೀಕರಿಸಲು ಯಾವುದೇ ಯಾವುದೇ ಅಧ್ಯಯನಗಳು ಲಭ್ಯವಿಲ್ಲ. ಗರ್ಭಾವಸ್ಥೆಯಲ್ಲಿ ತ್ವಚೆ ಮತ್ತು ಕೂದಲಿನ ಬದಲಾವಣೆಗಳು ಹಾರ್ಮೋನ್ ಮಟ್ಟದಲ್ಲಿನ ಬದಲಾವಣೆಗಳಿಂದಾಗಿ ಆಗುತ್ತವೆ. ಹಾರ್ಮೋನುಗಳ ಏರುಪೇರು ಮಗುವಿನ ಲಿಂಗಕ್ಕೆ ಸಂಬಂಧಿಸದೇ, ನಯವಾದ ತ್ವಚೆ ಮತ್ತು ಹೊಳಪುಳ್ಳ ಕೂದಲು ಲಭಿಸಲು ಅಥವಾ ವ್ಯತಿರಿಕ್ತವಾಗಿ ಮೊಡವೆ ಮತ್ತು ಕೂದಲ ಉದುರುವಿಕೆಗೂ ಕಾರಣವಾಗಬಹುದು.
4. ಆಹಾರ ಸೇವನೆಯ ಬಯಕೆ ಮಿಥ್ಯೆ: ಹುಳಿ ಆಹಾರಕ್ಕೆ ಬಯಕೆಯಾದರೆ ಗರ್ಭದಲ್ಲಿರುವುದು ಗಂಡು ಮಗು! ವಾಸ್ತವ: ಈ ವಿಷಯವನ್ನು ಖಚಿತಪಡಿಸಲು ಯಾವುದೇ ವೈಜ್ಞಾನಿಕ ಆಹಾರವಿಲ್ಲ. ಕೆಲವು ಬಗೆಯ ಆಹಾರ ಸೇವನೆಯ ಬಯಕೆಯೂ ರಸದೂತಗಳ ಪ್ರಭಾವದಿಂದಲೇ ಆಗುತ್ತದೆಯೇ ಹೊರತು ಇದಕ್ಕೆ ಮಗುವಿನ ಲಿಂಗ ಕಾರಣವಲ್ಲ. ಕೆಲವು ಪೋಷಕಾಂಶಗಳ ಅಥವಾ pharmacologically active substances (ಕೆಲವೇ ಆಹಾರಗಳಲ್ಲಿರುವ ವಿಶಿಷ್ಟ ಪೋಷಕಾಂಶಗಳು) ಕೊರತೆಯನ್ನೂ ದೇಹ ಈ ರೀತಿಯಾಗಿ ಕೇಳಿಕೊಳ್ಳುತ್ತಿರಲೂಬಹುದು.
5. ಉಬ್ಬಿರುವ ಹೊಟ್ಟೆಯ ಸ್ಥಾನ ಮಿಥ್ಯೆ: ಅತಿ ಕೆಳಗೆ ಜಗ್ಗಿದಂತಿದ್ದರೆ ಇದು ಗಂಡು ಮಗು ವಾಸ್ತವ: ಮಗು ಯಾವುದೇ ಇರಲಿ, ಗರ್ಭಕೋಶದಲ್ಲಿ ಕುಳಿತಿರುವ ಸ್ಥಾನ ಒಂದೇ ಆಗಿರುತ್ತದೆ. Birth ಎಂಬ ವೈಜ್ಞಾನಿಕ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ ಉಬ್ಬಿರುವ ಹೊಟ್ಟೆಯ ಗಾತ್ರ ಅಥವಾ ಸ್ಥಾನ ಮಗುವಿನ ಲಿಂಗವನ್ನು ನಿರ್ಧರಿಸಲು ಸಾಧ್ಯವಿಲ್ಲ. ಇವು ಏನಿದ್ದರೂ ಮಗುವಿನ ಇದುವರೆಗೆ ಪಡೆದಿರುವ ಬೆಳವಣಿಗೆ ಮತ್ತು ಗರ್ಭಕೋಶದ ಆಕಾರಗಳೇ ಕಾರಣವಾಗುತ್ತವೆ.
6. ಮನೋಭಾವ ಬದಲಾಗುವುದು ಮಿಥ್ಯೆ: ಗಂಡು ಮಗು ಇದ್ದರೆ ಮನೋಭಾವ ಅಷ್ಟೊಂದು ಬದಲಾಗುವುದಿಲ್ಲ. ಹೆಣ್ಣು ಮಗುವಾದರೆ ಅತಿ ಹೆಚ್ಚಿರುತ್ತದೆ. ವಾಸ್ತವ: ಗರ್ಭಾವಸ್ಥೆಯಲ್ಲಿ ರಸದೂತಗಳ ಪರಿಣಾಮದಿಂದ ಮನೋಭಾವಗಳ ಏರುಪೇರು ಸಾಮಾನ್ಯವಾಗಿದೆ ಹಾಗೂ ಇದಕ್ಕೂ ಮಗುವಿನ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ.
7. ಮೂತ್ರದ ಬಣ್ಣ ಮಿಥ್ಯೆ: ಮೂತ್ರದ ಬಣ್ಣ ಗರ್ಭಾವಸ್ಥೆಯಲ್ಲಿ ಬದಲಾಗುತ್ತದೆ. ಇದು ಗಾಢವಿದ್ದಷ್ಟೂ ಗಂಡು ಮಗು ಎಂಬ ಸೂಚನೆಯಾಗಿದೆ. ವಾಸ್ತವ: ಗರ್ಭಾವಸ್ಥೆಯ ವಿವಿಧ ಹಂತಗಳಲ್ಲಿ ಮೂತ್ರದ ಬಣ್ಣ ವಿವಿಧ ಬಗೆಗಳಲ್ಲಿ ಬದಲಾಗುತ್ತವೆ. ಗಾಢ ಬಣ್ಣ ಎಂದರೆ ನಿರ್ಜಲೀಕರಣದ ಸೂಚನೆಯಾಗಿದೆ. ಗರ್ಭಿಣಿಗೆ ವಾಂತಿ ಹಾಗೂ ವಾಕರಿಕೆ ಹೆಚ್ಚಿದ್ದರೆ, ದೇಹದಲ್ಲಿ ನೀರಿನ ಅಂಶವೂ ಕಡಿಮೆಯಾಗಿ ಮೂತ್ರದ ಬಣ್ಣ ಗಾಢವಾಗುತ್ತದೆ. ಕೆಲವು ಆಹಾರಗಳು, ಔಷಧಿಗಳು ಮತ್ತು ಹೆಚ್ಚುವರಿ ಔಷಧಿಗಳ ಸೇವನೆಯಿಂದಲೂ ಮೂತ್ರದ ಬಣ್ಣ ಬದಲಾಗಬಹುದು. ಇದಕ್ಕೂ ಮಗುವಿನ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ.
ತೂಕದಲ್ಲಿ ಏರಿಕೆ ಮಿಥ್ಯೆ: ಗಂಡು ಮಗುವಿದ್ದರೆ ತೂಕದಲ್ಲಿ ಏರಿಕೆ ಹೆಚ್ಚಾಗಿರುತ್ತದೆ ಮತ್ತು ಹೊಟ್ಟೆಯ ಭಾಗದಲ್ಲಿ ಹೆಚ್ಚು ಕಂಡುಬರುತ್ತದೆ. ಹೆಣ್ಣು ಮಗುವಾದರೆ ಮುಖ ಸಹಿತ ಇಡಿಯ ದೇಹವೇ ತುಂಬಿಕೊಳ್ಳುತ್ತದೆ. ವಾಸ್ತವ: ಗರ್ಭಾವಸ್ಥೆಯ ಎಲ್ಲಾ ಹಂತಗಳಲ್ಲಿಯೂ ಗರ್ಭಿಣಿಯ ದೇಹದ ತೂಕ ಏರುವುದು ಸಾಮಾನ್ಯ ಮತ್ತು ಏರಲೂಬೇಕು. ಆದರೆ ಇದಕ್ಕೆ ಮಗುವಿನ ಲಿಂಗ ಕಾರಣವಲ್ಲ. ಕೆಲವು ವೈದ್ಯಕೀಯ ಪರೀಕ್ಷೆಗಳ ಮೂಲಕ ಮಗುವಿನ ಲಿಂಗವನ್ನು ಖಚಿತವಾಗಿ ಸಾದರಪಡಿಸಬಲ್ಲವು ಮಗುವಿನ ಲಿಂಗವನ್ನು ಹೆರಿಗೆಗೂ ಮುನ್ನವೇ ಸ್ಪಷ್ಟಪಡಿಸುವುದು ಕಾನೂನಿನ ರೀತ್ಯಾ ಶಿಕ್ಷಾರ್ಹವಾಗಿದೆ. ಆದರೆ ಕೆಲವು ಉಪಕರಣಗಳ ಮೂಲಕ ವೈದ್ಯರು ಈ ಮಾಹಿತಿಯನ್ನು ಪಡೆಯಬಲ್ಲರು. ಆದರೆ ಇವರು ಈ ಮಾಹಿತಿಯನ್ನು ಗರ್ಭಿಣಿಗಾಗಲೀ ಆಕೆಯ ಮನೆಯವರಿಗಾಗಲೀ ತಿಳಿಸುವಂತಿಲ್ಲ.