ಬದುಕಿನ ರೋಮಾಂಚನಕಾರಿ ಘಟನೆ ಹಂಚಿಕೊಂಡ ಶಾಸ್ತ್ರಿ ಚೆಲುವೆ

ಬೆಂಗಳೂರು: ಶಾಸ್ತ್ರಿ ಸಿನಿಮಾ ಖ್ಯಾತಿಯ ಬಹುಭಾಷಾ ನಟಿ ಮಾನ್ಯಾ ನಾಯ್ಡು ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದಾರೆ. ನಿತ್ಯ ತಮ್ಮ ವೈಯಕ್ತಿಕ ಜೀವನದ ಕುರಿತು ಅಪ್‍ಡೇಟ್ ನೀಡುತ್ತಿರುತ್ತಾರೆ. ಆದರೆ ಈ ಬಾರಿ ಜೀವನದಲ್ಲಿ ತಾವು ಅನುಭವಿಸಿದ ಕಷ್ಟಗಳನ್ನು ಬಿಚ್ಚಿಟ್ಟಿದ್ದು, ಓದುವಾಗ ತಾವು ಪಟ್ಟ ಕಷ್ಟಗಳು, ಕೆಲಸ ಮಾಡಿ ಓದಿದ ಬಗೆ ಸೇರಿದಂತೆ ತಮ್ಮ ಜೀವನದ ರೋಮಾಂಚನಕಾರಿ ಘಟನೆಗಳನ್ನು ಹಂಚಿಕೊಳ್ಳುವ ಮೂಲಕ ಯುವ ಸಮೂಹವನ್ನು ಪ್ರೋತ್ಸಾಹಿಸಿದ್ದಾರೆ.

ಇನ್‍ಸ್ಟಾಗ್ರಾಮ್‍ನಲ್ಲಿ ಸುಧೀರ್ಘವಾಗಿ ಬರೆದುಕೊಳ್ಳುವ ಮೂಲಕ ತಮ್ಮ ಜೀವನದ ಕಷ್ಟ, ನಷ್ಟಗಳನ್ನು ಮಾನ್ಯಾ ಬಿಚ್ಚಿಟ್ಟಿದ್ದಾರೆ. ಸಾಲುಗಳನ್ನು ಬರೆದಿರುವ ಅವರು, ಈ ಪೋಸ್ಟ್ ವೈರಲ್ ಅಥವಾ ಟ್ರೋಲ್ ಆಗಲಿ ಎಂದು ಬಯಸುತ್ತೇನೆ. ಪಾಸಿಟಿವ್ ಸ್ಟೋರಿಗಳತ್ತಲೂ ಗಮನಹರಿಸುವಂತೆ ನಾನು ಮಾಧ್ಯಮಗಳಲ್ಲಿ ಕೇಳಿಕೊಳ್ಳುತ್ತೇನೆ. ಎಂದಿಗೂ ಛಲ ಬಿಡಬೇಡಿ ಎಂದು ಪ್ರತಿಯೊಬ್ಬರನ್ನೂ ಪ್ರೋತ್ಸಾಹಿಸಲು ಈ ಪೋಸ್ಟ್ ಮಾಡಿದ್ದೇನೆ. ನಾನು ಇದನ್ನು ಸಾಧಿಸಿರಬೇಕಾದರೆ, ನಿಮಗೂ ಅದು ಸಾಧ್ಯ ಎನ್ನುತ್ತ ಬರವಣಿಗೆ ಆರಂಭಿಸಿದ್ದಾರೆ.

ನಾನು ಚಿಕ್ಕವಳಿದ್ದಾಗಲೇ ತಂದೆ ಸಾವನ್ನಪ್ಪಿದರು. ಕುಟುಂಬದವರನ್ನು ನೋಡಿಕೊಳ್ಳಲು ಶಾಲೆ ಬಿಟ್ಟು ಕೆಲಸ ಮಾಡಬೇಕಾಯಿತು. ನಾನು ಶಾಲೆಯನ್ನು ಹೆಚ್ಚು ಪ್ರೀತಿಸುತ್ತಿದ್ದೆ. ಜೊತೆಗೆ ಹಸಿವಿನ ಬಗ್ಗೆ ಸಹ ನನಗೆ ಅರಿವಿತ್ತು. ಕಷ್ಟ ಪಟ್ಟು ಕೆಲಸ ಮಾಡಿ, 41 ಚಿತ್ರಗಳಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ ಬಳಿಕ ಬಂದ ಎಲ್ಲ ಹಣವನ್ನು ಅಮ್ಮನಿಗೆ ನೀಡಿ, ಓದಲು ಪ್ರಾರಂಭಿಸಿದೆ. ತುಂಬಾ ಕಷ್ಟ ಪಟ್ಟು ಓದಿ ಸ್ಯಾಟ್ ಎಕ್ಸಾಮ್ ಸಹ ಬರೆದೆ. ಅಲ್ಲದೆ ಐವಿ ಲೀಗ್‍ನಲ್ಲಿ ಓದುತ್ತೇನೆ ಎಂಬ ಕನಸನ್ನೂ ಕಂಡಿರಲಿಲ್ಲ. ನಂತರ ನ್ಯೂಯಾರ್ಕ್‍ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದೆ ಎಂದು ಕಾಲೇಜಿನ ದಿನಗಳ ಬಗ್ಗೆ ಮಾತನಾಡಿದ್ದಾರೆ.

Manya-Naidu

ಮೊದಲ ಬಾರಿಗೆ ಶಾಲೆಯ ಆವರಣದಲ್ಲಿ ಕಾಲಿಟ್ಟಾಗ ಬಿಕ್ಕಿ ಬಿಕ್ಕಿ ಅತ್ತಿದ್ದೆ. ಆದರೆ ಅದು ಸಂತಸದ ಕಣ್ಣೀರಾಗಿತ್ತು. ಬಾಲ್ಯದಲ್ಲಿ ನಾನು ಪ್ರೀತಿಸಿದ್ದನ್ನು ಮುಂದುವರಿಸಲು ಸಾಧ್ಯವಾಗಿದ್ದಕ್ಕೆ ಆನಂದಭಾಷ್ಪ ಹರಿದಿತ್ತು. ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುವುದು ಸುಲಭವಾಗಿತ್ತು. ಆದರೆ ಗಣಿತ, ಸಂಖ್ಯಾಶಾಸ್ತ್ರದಲ್ಲಿ ಗೌರವದೊಂದಿಗೆ ಪದವಿ ಪಡೆಯುವುದು ಹಾಗೂ ಪೂರ್ತಿ ಸ್ಕಾಲರ್‍ಶಿಪ್ ಪಡೆದಿದ್ದು ನನ್ನ ಜೀವನದ ತುಂಬಾ ಕಷ್ಟದ ದಿನಗಳು ಎಂದು ನೆನೆದಿದ್ದಾರೆ.

ಹಲವು ಬಾರಿ ನನಗೇ ದಣಿವಾಗಿ ಬಿಟ್ಟುಬಿಡಬೇಕು ಎಂದುಕೊಂಡೆ. ಅಲ್ಲದೆ ನನಗೆ ವೈಯಕ್ತಿಕ ಹಾಗೂ ಆರೋಗ್ಯ ಸಂಬಂಧಿ ಸಮಸ್ಯೆಗಳು ಸಹ ಇದ್ದವು. ಆದರೂ ನನಗೆ ನಾನೇ ಸಮಾಧಾನ ಮಾಡಿಕೊಂಡು ಪುಟಿದೇಳುತ್ತಿದ್ದೆ. ನನಗೆ ದೇವರ ಮೇಲೆ ನಂಬಿಕೆ ಇತ್ತು. ಹೀಗಾಗಿ ನನ್ನ ಎಲ್ಲದನ್ನೂ ದೇವರಿಗೆ ಸಮರ್ಪಿಸಿದ್ದೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಶಿಕ್ಷಣ ನೀವು ಹಾರಲು ರೆಕ್ಕೆಯನ್ನು ನೀಡುತ್ತದೆ. ನನ್ನ ಜ್ಞಾನವನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ. ಹೆಚ್ಚು ಜ್ಞಾನ ಪಡೆದಂತೆಲ್ಲ ವಿನಮ್ರರಾಗುತ್ತೀರಿ. ವಿಶ್ವದಲ್ಲಿ ನೀವು ಎಷ್ಟು ಚಿಕ್ಕವರು ಎಂಬುದನ್ನು ಅರಿಯುತ್ತೀರಿ. ನಾವೆಲ್ಲರೂ ಅನನ್ಯವಾಗಿ ಜನಿಸಿದ್ದೇವೆ. ಇದನ್ನು ಯಾವಾಗಲೂ ನೆನಪಿಡಿ. ಯು ಆರ್ ಸ್ಪೆಷಲ್….. ಈ ನನ್ನ ಪೋಸ್ಟ್‍ನಿಂದ ಕನಿಷ್ಟ ಒಬ್ಬರಿಗಾದರೂ ಪ್ರೋತ್ಸಾಹ ದೊರೆಯುತ್ತದೆ ಎಂಬ ಉದ್ದೇಶದಿಂದ ಹಂಚಿಕೊಂಡಿದ್ದೇನೆ. ಈ ಮೂಲಕ ನನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ….ಲವ್ ಯು ಆಲ್ ಎಂದು ತಮ್ಮ ಸುದೀರ್ಘ ಬರಹವನ್ನು ಮುಗಿಸಿದ್ದಾರೆ.

ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ...