ಜೇಮ್ಸ್ ಸಿನಿಮಾ ನಾಯಕಿ ಫಿಕ್ಸ್- ಮತ್ತೆ ಒಂದಾಗುತ್ತಿದೆ ರಾಜಕುಮಾರ ಜೋಡಿ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಪುನೀತ್ ರಾಜ್‍ಕುಮಾರ್ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರ ತಂಡದಿಂದ ಸಿಹಿ ಸುದ್ದಿ ಹೊರ ಬಿದ್ದಿದ್ದು, ಹೀರೋಯಿನ್ ಆಯ್ಕೆ ಮಾಡಲಾಗಿದೆ.

ಅನ್‍ಲಾಕ್ ಬಳಿಕ ಬಹುತೇಕ ಚಿತ್ರಗಳ ಶೂಟಿಂಗ್ ಚುರುಕುಗೊಂಡಿದ್ದು, ಯುವರತ್ನ ಸಿನಿಮಾದ ಅಂತಿಮ ಹಂತದ ಚಿತ್ರೀಕರಣ ಮೊನ್ನೆಯಷ್ಟೇ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಅಪ್ಪು ಜೇಮ್ಸ್ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಲಾಕ್‍ಡೌನ್ ವೇಳೆ ಫುಲ್ ರೆಸ್ಟ್ ಮೂಡ್‍ನಲ್ಲಿದ್ದ ಅಪ್ಪು ಇದೀಗ ಸಖತ್ ಬ್ಯುಸಿಯಾಗಿದ್ದಾರೆ. ಯುವರತ್ನ ಚಿತ್ರೀಕರಣ ಪೂರ್ಣಗೊಳಿಸಿ ಸದ್ಯ ಜೇಮ್ಸ್ ಶೂಟಿಂಗ್ ಶುರು ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಜೇಮ್ಸ್ ಸಿನಿಮಾ ಸದ್ದು ಮಾಡುತ್ತಿದ್ದು, ಇದೀಗ ಚಿತ್ರೀಕರಣ ಆರಂಭವಾಗಿದೆ. ಭರ್ಜರಿ ಚೇತನ್ ಕುಮಾರ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸಿನಿಮಾ ಯಾವ ರೀತಿ ಮೂಡಿ ಬರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಚಿತ್ರೀಕರಣ ಆರಂಭವಾಗುತ್ತಿದ್ದಂತೆ ಚಿತ್ರದ ಕುರಿತು ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದ್ದು, ತಾರಾಗಣದ ಬಗ್ಗೆ ಸಹ ಪ್ರಶ್ನಿಸುತ್ತಿದ್ದಾರೆ. ಪ್ರಮುಖವಾಗಿ ಪುನೀತ್ ಜೊತೆ ಯಾರು ರೊಮಾನ್ಸ್ ಮಾಡಲಿದ್ದಾರೆ, ನಾಯಕಿ ಯಾರಾಗಬಹುದು ಎಂಬ ಚರ್ಚೆ ನಡೆಯುತ್ತಿತ್ತು. ಇದಕ್ಕೆ ಇದೀಗ ತೆರೆ ಬಿದ್ದಿದ್ದು, ಹಿರೋಯಿನ್ ಹೆಸರು ಬಹಿರಂಗವಾಗಿದೆ. ಜೇಮ್ಸ್ ಚಿತ್ರದಲ್ಲಿ ಅಪ್ಪು ಜೊತೆ ತಮಿಳು ನಟಿ ಪ್ರಿಯಾ ಆನಂದ್ ರೊಮ್ಯಾನ್ಸ್ ಮಾಡಲಿದ್ದಾರೆ.

ಹೌದು ಈ ಕುರಿತು ಟ್ವಿಟ್ಟರ್ ಮೂಲಕ ಸ್ವತಃ ಪ್ರಿಯಾ ಅವರೇ ಈ ಕುರಿತು ಸ್ಪಷ್ಟಪಡಿಸಿದ್ದು, ಸಂತಸ ವಿಚಾರವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಇದರಿಂದಾಗಿ ಪ್ರಿಯಾ ಆನಂದ್, ಅಪ್ಪು ಜೊತೆ ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಈ ಹಿಂದೆ ಸೂಪರ್ ಹಿಟ್ ರಾಜಕುಮಾರ ಚಿತ್ರದಲ್ಲಿ ಸಹ ಪ್ರಿಯಾ ತೆರೆ ಹಂಚಿಕೊಂಡಿದ್ದಾರೆ.

James-Cinema

ರಾಜಕುಮಾರ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟಿರುವ ನಟಿ ಪ್ರಿಯಾ ಇದೀಗ ನಾಲ್ಕನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ರಾಜಕುಮಾರ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಆರೆಂಜ್ ಸಿನಿಮಾ ಮಾಡಿದ್ದು, ಬಳಿಕ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಆರ್‍ಡಿಎಕ್ಸ್ ಸಿನಿಮಾಗೆ ಸಹ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದೀಗ ಜೇಮ್ಸ್ ಚಿತ್ರದಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ.

ಇನ್ನೂ ವಿಶೇಷ ಎಂಬಂತೆ ಈ ಸಿನಿಮಾದಲ್ಲಿ ಅನು ಪ್ರಭಾಕರ್ ಸಹ ನಟಿಸುತ್ತಿದ್ದು, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. 55ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅನು ಪ್ರಭಾಕರ್ ಇದೀಗ ಮೊದಲ ಬಾರಿಗೆ ಪುನೀತ್ ರಾಜ್‍ಕುಮಾರ್ ಜೊತೆ ಬಣ್ಣ ಹಚ್ಚುತ್ತಿದ್ದಾರೆ. ಅನು ಪ್ರಭಾಕರ್ ಚಿತ್ರ ತಂಡ ಸೇರಿರುವುದು ಅಭಿಮಾನಿಗಳಲ್ಲಿ ಇನ್ನೂ ಕುತೂಹಲ ಹೆಚ್ಚಿಸಿದ್ದು, ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕಾತರದಿಂದ ಕಾಯುತ್ತಿದ್ದಾರೆ.

ಇತ್ತೀಚೆಗೆ ತೆಲುಗು ನಟ ಆದಿತ್ಯ ಮೆನನ್ ಸಹ ಚಿತ್ರ ತಂಡ ಸೇರಿಕೊಂಡಿದ್ದು ಚಿತ್ರೀಕರಣ ಭರದಿಂದ ಸಾಗಿದೆ. ಪ್ರಸ್ತುತ ಬಳ್ಳಾರಿಯ ಹೊಸಪೇಟೆ ತಾಲೂಕಿನ ಕಮಲಾಪುರದ ಆರೆಂಜ್ ಕೌಂಟಿಯಲ್ಲಿ ಶೂಟಿಂಗ್ ನಡೆಯುತ್ತಿದ್ದು, ಬುಧವಾರ ಅಪ್ಪು ಸಹ ಶೂಟಿಂಗ್ ಸೆಟ್‍ಗೆ ಆಗಮಿಸಿದ್ದರು. ಆರಂಭದ ನಾಲ್ಕು ದಿನ ರೆಸಾರ್ಟ್‍ನಲ್ಲಿ ಬಳಿಕ ಗಂಗಾವತಿಯ ಸುತ್ತಮುತ್ತ ಶೂಟಿಂಗ್ ನಡೆಯಲಿದೆ. ಇದಕ್ಕಾಗಿಯೇ ಗಂಗಾವತಿಯಲ್ಲಿ ಭವ್ಯ ಸೆಟ್ ಹಾಕಲಾಗಿದೆ.

ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ...