ದೇಶಾದ್ಯಂತ ಕೋವಿಡ್-19 ಹಬ್ಬಿರುವ ಕಾರಣ ಕೇಂದ್ರ ಸರ್ಕಾರ ವಿಶೇಷ ಯೋಜನೆಯಡಿ ಉಚಿತವಾಗಿ ನೀಡುತ್ತಿರುವ ಆಹಾರಧಾನ್ಯಗಳನ್ನು ಮುಂದಿನ ಮಾರ್ಚ್ ತಿಂಗಳವರೆಗೂ ಸಾರ್ವಜನಿಕರಿಗೆ ವಿಸ್ತರಣೆ ಮಾಡಬೇಕೆಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ.

ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ , ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಉಚಿತವಾಗಿ ನೀಡುತ್ತಿರುವ ಆಹಾರ ಧಾನ್ಯಗಳನ್ನು ನವೆಂಬರ್ ತಿಂಗಳವರೆಗೆ ಮಾತ್ರ ವಿತರಣೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಜನರು ಇನ್ನು ಸಂಕಷ್ಟ ಸ್ಥಿತಿಯಲ್ಲಿರುವ ಕಾರಣ ಮಾರ್ಚ್ 21ರವರೆಗೆ ಈ ಯೋಜನೆಯನ್ನು ಮುಂದುವರೆಸುವಂತೆ ಒತ್ತಾಯಿಸಿದ್ದಾರೆ.

ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಜನರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡ ಕಾರಣ ಕೇಂದ್ರ ಸರ್ಕಾರ ಮಾನವೀಯತೆಯಿಂದ ಇನ್ನು ಮಾರ್ಚ್‍ವರೆಗೆ ಉಚಿತವಾಗಿ ಅಕ್ಕಿ, ಕಡಲೇಕಾಳು, ಗೋಧಿ ಸೇರಿದಂತೆ ಮತ್ತಿತರ ಆಹಾರ ಧಾನ್ಯಗಳನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ.

ಪ್ರಧಾನಿಯವರು ಜಾರಿಗೆ ತಂದ ಈ ಯೋಜನೆಯಿಂದ ದೇಶದಲ್ಲಿ ಕೋಟ್ಯಂತರ ಜನರು ಎರಡು ಹೊತ್ತು ನೆಮ್ಮದಿಯಿಂದ ಊಟ ಮಾಡಲು ಅನುಕೂಲವಾಗಿದೆ. ಮಾರ್ಚ್‍ವರೆಗೆ ಮುಂದುವರೆಸಿದರೆ ದೇಶದ ಜನತೆ ಅವರನ್ನು ಶಾಶ್ವತವಾಗಿ ಸ್ಮರಿಸುತ್ತಾರೆ ಎಂದು ಹೇಳಿದ್ದಾರೆ.  ಇನ್ನು ಕೇಂದ್ರ ಸರ್ಕಾರ ಮೂರು ತಿಂಗಳಿನಿಂದ ತಡೆಹಿಡಿದಿರುವ ಕಮೀಷನ್ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.

Distribution-free-rations

ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಪಡಿತರ ವಿತರಕರಿಗೆ ನೀಡಬೇಕಾಗಿದ್ದ ಕಮೀಷನ್ ಹಣವನ್ನು ತಡೆ ಹಿಡಿದ ಪರಿಣಾಮ ಸಾವಿರಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ದೈನಂದಿನ ಜೀವನ ನಡೆಸುವುದು ದುಸ್ತರವಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಕಳೆದ ಮಾರ್ಚ್ ತಿಂಗಳಿನಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಬಂದ ನಂತರ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಆರ್ಥಿಕ ಚಟುವಟಿಕೆಗಳು ಕುಸಿತಕಂಡಿವೆ. ಇದೀಗ ರಾಜ್ಯದ ಕೆಲವು ಕಡೆ ಪ್ರವಾಹ ಉಂಟಾಗಿ ಜನರ ಬದುಕು ಇನ್ನಷ್ಟು ಸಂಕಷ್ಟ ಸ್ಥಿತಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಬಂದ ನಂತರ ಕೇಂದ್ರ ಸರ್ಕಾರ ಸಾರ್ವಜನಿಕ ಪಡಿತರ ವಿತರಣಾ ಯೋಜನೆಯಲ್ಲಿ ಕರ್ನಾಟಕಕ್ಕೆ ಆಹಾರ ಧಾನ್ಯಗಳನ್ನು ನವೆಂಬರ್ ತಿಂಗಳವರೆಗೂ ವಿತರಿಸುವುದಾಗಿ ಘೋಷಣೆ ಮಾಡಿತ್ತು. ಇದರಿಂದ ಬಡತನ ರೇಖೆಗಿಂತ ಕೆಳಗಿರುವವರು, ಮಧ್ಯವರ್ಗದವರು ಸೇರಿದಂತೆ ಲಕ್ಷಾಂತರ ಮಂದಿಗೆ ಅನುಕೂಲವಾಗಿದೆ.

ಕೇಂದ್ರ ಸರ್ಕಾರದ ಸೂಚನೆಯಂತೆ ಸರ್ಕಾರಿ ಪಡಿತರ ವಿತರಕರ ಸಂಘವು ಸಮರ್ಪಕವಾಗಿ ಗೋದಾಮುಗಳಿಗೆ ವಿತರಣೆ ಮಾಡಿದೆ. ಪ್ರತಿ ಕೆಜಿಗೆ ಇಂತಿಷ್ಟು ಕಮೀಷನ್ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿತ್ತು. ಇದೀಗ ಏಕಾಏಕಿ ಯಾವುದೇ ಮುನ್ಸೂಚನೆಯನ್ನು ನೀಡದೆ ಕಳೆದ ಮೂರು ತಿಂಗಳಿನಿಂದ ಕಮೀಷನ್ ಹಣವನ್ನು ಬಿಡುಗಡೆ ಮಾಡಿಲ್ಲ.
ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವೂ ಆಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರು ಕೂಡಲೇ ಕಮೀಷನ್ ಹಣವನ್ನು ಬಿಡುಗಡೆ ಮಾಡಬೇಕೆಂದು ಪತ್ರ ಮುಖೇನ ಒತ್ತಾಯಿಸಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •