ಅನುಮಾನದ ರೋಗಕ್ಕೆ ಬಲಿ! ಹಿಂದಿ ಶಿಕ್ಷಕಿಯಾಗಿದ್ದ ಹೆಂಡತಿಯನ್ನು ಕೊಲೆ ಮಾಡಿದ ದೈಹಿಕ ಶಿಕ್ಷಕ ಗಂಡ.

ಕಲಬುರಗಿ ನಗರದ ಅಂಬಿಕಾ ನಗರದಲ್ಲಿ ಕಳೆದ ರಾತ್ರಿ ಮಹಿಳೆಯೊಬ್ಬರ ಬರ್ಬರ ಕೊಲೆಯಾಗಿದೆ. ಕೊಲೆಯಾದ ಮಹಿಳೆಯ ಹೆಸರು ಫರೀದಾ ಬೇಗಂ ಅಂತ. 39 ವರ್ಷದ ಫರೀದಾ ಬೇಗಂ,
ಜಿಲ್ಲೆಯ ಅಫಜಲಪುರ ತಾಲೂಕಿನ ಅತನೂರು ಗ್ರಾಮದಲ್ಲಿರುವ ಸರ್ಕಾರಿ ಆದರ್ಶ ಶಾಲೆಯ ಹೈಸ್ಕೂಲ್ ನಲ್ಲಿ ಹಿಂದಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ನಿನ್ನೆ ಶಾಲೆಗೆ ಹೋಗಿದ್ದ ಫರೀದಾ ಬೇಗಂ, ಇಂದು ಎಸ್ ಎಸ್ ಎಲ್ ಸಿ ಮಕ್ಕಳಿಗೆ ಹಿಂದಿ ಪೂರ್ವಭಾವಿ ಪರೀಕ್ಷೆ ಇದ್ದಿದ್ದರಿಂದ, ಪ್ರಶ್ನೆ ಪತ್ರಿಕೆ ಸಿದ್ದಗೊಳಿಸಿ,
ಮಕ್ಕಳಿಗೆ ಸರಿಯಾಗಿ ಪರೀಕ್ಷೆ ಬರೆಯಬೇಕು. ಸರಿಯಾಗಿ ಶಾಲೆಗೆ ಬನ್ನಿ, ನಾನು ಕೂಡಾ ಬೇಗನೆ ಬರ್ತೀನಿ ಅಂತ ಹೇಳಿ ಬಂದಿದ್ದರಂತೆ. ಆದ್ರೆ ರಾತ್ರಿ ಕಳೆದು ಬೆಳಗಾಗೋದರಲ್ಲಿ ಶಿಕ್ಷಕಿ ಫರೀದಾ ಬೇಗಂ ಬರ್ಬರವಾಗಿ ಕೊಲೆಯಾಗಿದ್ದಾರೆ. ಇನ್ನು ಕೊಲೆ ಮಾಡಿದ್ದು ಬೇರಾರು ಅಲ್ಲಾ, ಫರೀದಾ ಬೇಗಂ ಅವರ ಗಂಡ ಎಜಾಜ್ ಅಹ್ಮದ್.

ಹೌದು ಕಳೆದ ರಾತ್ರಿ 11 ಗಂಟೆಯ ಸಮಯದಲ್ಲಿ, ಫರೀದಾ ಬೇಗಂ ಮತ್ತು ಎಜಾಜ್ ನಡುವೆ ಮಾತಿನ ಚಕಮಕಿಯಾಗಿದೆ. ಅದನ್ನೇ ಗಂಭೀರವಾಗಿ ತಗೆದಕೊಂಡು ಪತಿ ಎಜಾಜ್ ಅಹ್ಮದ್, ಫರೀದಾ ಬೇಗಂ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

ಇನ್ನು ಫರೀದಾ ಬೇಗಂ ಪತಿ, ಎಜಾಜ್ ಅಹ್ಮದ್ ಕೂಡಾ, ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕ. ಹೌದು ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದಲ್ಲಿರುವ ಮೂರಾರ್ಜಿ ವಸತಿ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿದ್ದಾನೆ.ಈ ಮೊದಲು ಪೊಲೀಸ್ ಕಾನಸ್ಟೇಬಲ್ ಆಗಿದ್ದ ಎಜಾಜ್, ನಂತರ ದೈಹಿಕ ಶಿಕ್ಷಕನಾಗಿ ಆಯ್ಕೆಯಾಗಿದ್ದರಿಂದ, ಪೊಲೀಸ್ ಕೆಲಸ ಬಿಟ್ಟು ಶಿಕ್ಷಕ ವೃತ್ತಿ ಆಯ್ದುಕೊಂಡಿದ್ದ.

ಇನ್ನು ಚಿಲ್ಲೆಯ ಚಿಂಚೋಳಿ ತಾಲೂಕಿನ ಚಿಮ್ಮನಚೂಡ ಗ್ರಾಮದ ನಿವಾಸಿಯಾಗಿದ್ದ ಫರೀದಾ ಬೇಗಂ 12 ವರ್ಷದ ಹಿಂದೆ ಎಜಾಜ್ ಅಹ್ಮದ್ ಜೊತೆ ವಿವಾಹವಾಗಿತ್ತು. ಆರಂಭದಲ್ಲಿ ದಂಪತಿ ಚೆನ್ನಾಗಿಯೇ ಇದ್ದರಂತೆ.
ದಂಪತಿಗೆ ಇಬ್ಬರು ಮಕ್ಕಳು ಕೂಡಾ ಇವೆ. ಆದ್ರೆ ಕಳೆದ ಕೆಲ ವರ್ಷಗಳಿಂದ ಎಜಾಜ್ ಅಹ್ಮದ್, ಫರೀದಾ ಬೇಗಂ ಮೇಲೆ ಅನುಮಾನಗೊಂಡಿದ್ದ. ಪತ್ನಿಯ ಮೊಬೈಲ್ ಚೆಕ್ ಮಾಡೋದು, ಯಾರ ಜೊತೆ ಮಾತನಾಡ್ತೀಯಾ ಅಂತ ಕೇಳೋದು,
ಅವರಿವರ ಜೊತೆ ಸಂಬಂಧವಿದೆ ಅಂತ ಆರೋಪಿಸುವುದು ಮಾಡುತ್ತಿದ್ದನಂತೆ. ಆದರೂ ಕೂಡಾ ಮಕ್ಕಳ ಭವಿಷ್ಯಕ್ಕಾಗಿ ಪತ್ನಿ ಹೊಂದಾಣಿಕೆ ಮಾಡಿಕೊಂಡು ಸಂಸಾರ ಮಾಡುತ್ತಿದ್ದಳಂತೆ. ಜೊತೆಗೆ ಪರೀದಾ ಬೇಗಂ, ವರ್ಷದ ಹಿಂದೆ ಕಲಬುರಗಿ ನಗರದಲ್ಲಿ ಸೈಟ್ ಖರೀದಿಸಿದ್ದಳಂತೆ. ಆ ಸೈಟ್ ನ್ನು ತನ್ನ ಹೆಸರಿಗೆ ಮಾಡುವಂತೆ ಎಜಾಜ್ ಅಹ್ಮದ್ ಪೀಡಿಸುತ್ತಿದ್ದನಂತೆ.
ಸದ್ಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಎಜಾಜ್ ಅಹ್ಮದನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅನುಮಾನಂ ಪೆದ್ದರೋಗಂ ಅಂತಾರೆ. ಆದ್ರೆ ಇದೇ ಅನುಮಾನದ ಹುತ್ತಕ್ಕೆ, ನೂರಾರು ಮಕ್ಕಳಿಗೆ ತಪ್ಪು ಮಾಡಿದಾಗ ಬುದ್ದಿ ಹೇಳಬೇಕಿದ್ದ ಪತಿಯೇ, ಪತ್ನಿಯನ್ನು ಕೊಲೆ ಮಾಡಿದ್ದು ಮಾತ್ರ ದುರಂತವೇ ಸರಿ.

You might also like

Comments are closed.