ಭಾರತದಲ್ಲಿ ಹಾವು ಕಡಿತದಿಂದ ಅತಿ ಹೆಚ್ಚು ಸಾವು ಸಂಭವಿಸುತ್ತಿದೆ. ಹಾವು ಕಚ್ಚಿದ ವ್ಯಕ್ತಿಗೆ ಸರಿಯಾದ ಚಿಕಿತ್ಸೆ ಸಿಕ್ಕರೆ ಆತನ ಜೀವ ಉಳಿಸಬಹುದು. ಹಾವು ಕಚ್ಚಿದ ನಂತ್ರ ಏನು ಮಾಡ್ಬೇಕು? ಏನು ಮಾಡ್ಬಾರದು ಎಂಬುದು ತಿಳಿದಿರುವುದು ಅತ್ಯಗತ್ಯ.
ಹಾವು (Snake).. ಹೆಸರು ಕೇಳ್ತಿದ್ದಂತೆ ಅನೇಕರು ಬೆಚ್ಚಿ ಬೀಳ್ತಾರೆ. ಕನಸಿ (Dream)ನಲ್ಲಿ ಹಾವು ಕಂಡ್ರು ಭಯ (Fear)ವಾಗುತ್ತದೆ. ಭಾರತದಲ್ಲಿ ನಾನಾ ಬಗೆಯ ಹಾವುಗಳಿವೆ. ಹಾವು ಕಡಿತದಿಂದ ಹೆಚ್ಚು ಜನರು ಸಾಯುವ ವಿಶ್ವದ ಏಕೈಕ ದೇಶ ಭಾರತ ಅಂದ್ರೆ ನೀವು ನಂಬ್ಲೇಬೇಕು. ವಿಶ್ವಾದ್ಯಂತ ಪ್ರತಿ ವರ್ಷ ಹಾವು ಕಡಿತದಿಂದ ಸಾವನ್ನಪ್ಪುವ ಜನರಲ್ಲಿ ಅರ್ಧದಷ್ಟು ಸಾವು ಭಾರತ (India)ದಲ್ಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, 2000 ರಿಂದ 2019 ರವರೆಗೆ ಹಾವು ಕಡಿತದಿಂದಾಗಿರುವ ಸಾವಿನ ಬಗ್ಗೆ ವಿಶ್ಲೇಷಣೆ ಮಾಡಲಾಗಿದೆ. 2000 ರಿಂದ 2019 ರವರೆಗೆ ಭಾರತದಲ್ಲಿ ಹಾವು ಕಡಿತದಿಂದ 1.2 ಮಿಲಿಯನ್ (ವರ್ಷಕ್ಕೆ ಸರಾಸರಿ 58,000) ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಸಾವನ್ನಪ್ಪಿದ ಸುಮಾರು ಅರ್ಧದಷ್ಟು ಜನರು 30-69 ವರ್ಷದವರು. ಕಾಲು ಭಾಗಕ್ಕಿಂತ ಹೆಚ್ಚು ಜನರು 15 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳು ಎಂದು ವರದಿಯಲ್ಲಿ ಹೇಳಲಾಗಿದೆ.
ಇನ್ನು ವರದಿಯಲ್ಲಿ ಯಾವ ರಾಜ್ಯದಲ್ಲಿ ಹೆಚ್ಚು ಸಾವು ಸಂಭವಿಸಿದೆ ಎಂಬುದನ್ನೂ ಹೇಳಲಾಗಿದೆ. ವರದಿ ಪ್ರಕಾರ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ಉತ್ತರ ಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ನಲ್ಲಿ ಹಾವಿನಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಿದೆ. ವಿಶ್ವ ಆರೋಗ್ಯ ಸಂಸ್ಥೆ 2030 ರ ವೇಳೆಗೆ ಹಾವು ಕಡಿತದ ಸಾವಿನ ಸಂಖ್ಯೆಯನ್ನು ಅರ್ಧಕ್ಕೆ ಇಳಿಸುವ ಗುರಿಯನ್ನು ಹೊಂದಿದೆ.
ಹಾವು ಕಚ್ಚಿದ್ರೆ ಏನು ಮಾಡ್ಬೇಕು ? : ಹಾವು ಕಡಿದ್ರೂ ಅನೇಕರ ಪ್ರಾಣವನ್ನು ಉಳಿಸಬಹುದು. ಆದ್ರೆ ಅನೇಕರು ಹಾವು ಕಾಣುತ್ತಿದ್ದಂತೆ ಅರೆಜೀವವಾಗಿರ್ತಾರೆ. ಹಾವು ಕಡಿಯುತ್ತಿದ್ದಂತೆ ಹೃದಯಾಘಾತಕ್ಕೊಳಗಾಗ್ತಾರೆ. ಹಾವು ಕಚ್ಚಿದ ತಕ್ಷಣ ಚಿಕಿತ್ಸೆ ಸಿಕ್ಕಿದಲ್ಲಿ ಬದುಕುವ ಛಾನ್ಸ್ ಹೆಚ್ಚಿರುತ್ತದೆ. ಹಾವು ಕಚ್ಚಿದ ತಕ್ಷಣ ವೈದ್ಯರನ್ನು ಭೇಟಿಯಾಗ್ಬೇಕೆಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (CDC) ಸೂಚನೆ ನೀಡುತ್ತದೆ.
ಹಾವು ಕಚ್ಚಿದ್ರೆ ಯಾವ ಔಷಧಿ ಪರಿಣಾಮಕಾರಿ : ಹಾವಿನಿಂದ ಕಚ್ಚಿಸಿಕೊಂಡವರಿಗೆ ಆಂಟಿವೆನೊಮ್ ಔಷಧಿಯನ್ನು ನೀಡಬೇಕು. ಇದು ಹಾವಿನ ವಿಷ ಹರಡದಂತೆ ನೋಡಿಕೊಳ್ಳುತ್ತದೆ. ರಕ್ತ, ಅಂಗಾಂಶ ಅಥವಾ ನರಮಂಡಲಕ್ಕೆ ಹಾನಿಯಾಗದಂತೆ ತಡೆಯುತ್ತದೆ. ಸಾಕಷ್ಟು ದೂರದಿಂದ ಹಾವಿನ ಫೋಟೋವನ್ನು ತೆಗೆಯಬೇಕು. ವೈದ್ಯರಿಗೆ ಯಾವ ಹಾವು ಕಚ್ಚಿದೆ ಎಂಬುದು ಗೊತ್ತಾದ್ರೆ ಔಷಧಿ ನೀಡುವುದು ಸುಲಭವಾಗುತ್ತದೆ.
ಭಯ ಬೇಡ : ಮೊದಲೇ ಹೇಳಿದಂತೆ ಹಾವು ಕಚ್ಚಿದ ತಕ್ಷಣ ಭಯಗೊಳ್ಳುವ ಅವಶ್ಯಕತೆಯಿಲ್ಲ. ಶಾಂತವಾಗಿದ್ದು, ವಿಷ್ಯವನ್ನು ಮನೆಯವರಿಗೆ ತಿಳಿಸಿ. ವೈದ್ಯರು ಬರುವವರೆಗೆ ಆರಾಮವಾಗಿ ಕುಳಿತುಕೊಳ್ಳಿ. ಊತ ಶುರುವಾಗುವ ಮೊದಲು ಉಂಗುರ, ವಾಚ್ ತೆಗೆದುಹಾಕಿ.
ಹಾವು ಕಚ್ಚಿದ ಜಾಗದ ಸ್ವಚ್ಛತೆ : ಹಾವು ಕಚ್ಚಿದ ಜಾಗಕ್ಕೆ ಸೋಪ್ ಹಚ್ಚಿ ಸ್ವಚ್ಛಗೊಳಿಸಿ. ಯಾವುದೇ ಕಾರಣಕ್ಕೂ ಕಚ್ಚಿದ ಜಾಗವನ್ನು ಕೊಳಕು ಬಟ್ಟೆಯಿಂದ ಕವರ್ ಮಾಡ್ಬೇಡಿ. ಶುದ್ಧವಾದ ಬಟ್ಟೆಯನ್ನು ಬಳಸಿ.
ಹಾವು ಕಚ್ಚಿದಾಗ ಈ ಕೆಲಸ ಮಾಡ್ಬೇಡಿ : ಹಾವು ಕಚ್ಚಿದ ತಕ್ಷಣ ನಿಮ್ಮ ರಕ್ಷಣೆಗೆ ಮುಂದಾಗುವ ಬದಲು ಹಾವನ್ನು ಹಿಡಿಯಲು ಹೋಗುವುದು ಅಥವಾ ಅದನ್ನು ಬಲೆಗೆ ಬೀಳಿಸುವ ಪ್ರಯತ್ನ ಮಾಡ್ಬೇಡಿ. ಹಾವು ಕಚ್ಚಿದ್ರೂ ನನಗೇನು ಆಗಿಲ್ಲ ಎನ್ನುವಂತಿರಬೇಡಿ. ಲಕ್ಷಣಗಳು ಕಾಣಿಸಿಕೊಳ್ಳುವವರೆಗೂ ನಿರ್ಲಕ್ಷ್ಯ ಬೇಡ. ತಕ್ಷಣ ವೈದ್ಯರನ್ನು ಭೇಟಿಯಾಗಿ. ಗಾಯವನ್ನು ಚಾಕುವಿನಿಂದ ಕತ್ತರಿಸಬೇಡಿ. ಹಾಗೆ ವಿಷವನ್ನು ತೆಗೆಯಲು ಬಾಯಿ ಹಾಕುವ ಪ್ರಯತ್ನಬೇಡಿ. ಗಾಯದ ಜಾಗಕ್ಕೆ ಐಸ್ ಹಚ್ಚಬೇಡಿ. ಗಾಯವನ್ನು ನೀರಿನಲ್ಲಿ ಮುಳುಗಿಸಬೇಡಿ. ನೋವು ನಿವಾರಕವಾಗಿ ಆಲ್ಕೋಹಾಲ್ ಸೇವಿಸಬೇಡಿ. ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ. ಯಾವುದೇ ಕಾರಣಕ್ಕೂ ಮನೆಯಲ್ಲಿಯೇ ಔಷಧಿ ಮಾಡುವ ಪ್ರಯತ್ನ ಮಾಡಬೇಡಿ.