ಪುನೀತ್ ರಾಜ್‌ಕುಮಾರ್ ಅವರು ಕೇವಲ ನಟನಾಗಿ ಅಷ್ಟೇ ಅಲ್ಲ, ಒಬ್ಬ ಅದ್ಭುತ ವ್ಯಕ್ತಿತ್ವದ ವ್ಯಕ್ತಿಯಾಗಿ ಕೋಟ್ಯಂತರ ಅಭಿಮಾನಿಗಳಿಗೆ ಸ್ಫೂರ್ತಿಯಾದವರು. ಅಪ್ಪು ನಿಧನರಾದ ನಂತರ ಅವರ ಕಣ್ಣುಗಳನ್ನು ದಾನ ಮಾಡಲಾಗಿತ್ತು. ಅಪ್ಪು ಮಾರ್ಗವನ್ನೇ ಅನುಸರಿಸಿದ ಲಕ್ಷಾಂತರ ಅಭಿಮಾನಿಗಳು ಅವರಂತೆ ನೇತ್ರದಾನ ಮಾಡಲು ದಾಖಲು ಮಾಡಿಕೊಂಡರು. ಇದೀಗ ಚಿಕ್ಕಮಗಳೂರಿನ ಅಪ್ಪು ಅಭಿಮಾನಿಯೊಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡಾದ ರಕ್ಷಿತಾ ಎನ್ನುವ ವಿದ್ಯಾರ್ಥಿನಿ ನಿನ್ನೆ(ಸಪ್ಟೆಂಬರ್ 21)ರಂದು ಕಾಲೇಜಿಗೆ ತೆರಳುವಾಗ ಆಯತಪ್ಪಿ ಬಸ್‌ನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ರಕ್ಷಿತಾ ಮೆದುಳು ನಿಷ್ಕ್ರಿಯಗೊಂಡಿತ್ತು. ಆಕೆಯನ್ನು ಮೃತ ಎಂದು ಘೋಷಿಸಲಾಯ್ತು. ಆಕೆಯ ಕುಟುಂಬಸ್ಥರು ಪುನೀತ್ ರಾಜ್‌ಕುಮಾರ್ ಅವರನ್ನೇ ಸ್ಫೂರ್ತಿಯಾಗಿಸಿಕೊಂಡು ರಕ್ಷಿತಾ ಅಂಗಾಗ ದಾನ ಮಾಡಲು ಮುಂದಾದರು. ಸಾವಿನಲ್ಲೂ ಸಾರ್ಥಕತೆ ಮೆರೆಯುವ ಮೂಲಕ ರಕ್ಷಿತಾ 9 ಜನರ ಬಾಳಿಗೆ ಬೆಳಕಾಗಿದ್ದಾರೆ. ಇಂದು(ಸಪ್ಟೆಂಬರ್ 23) ರಕ್ಷಿತಾ ಹೃದಯವನ್ನು ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಯಿತು. ಅಂಗಾಗ ದಾನಗಳ ಬಳಿಕ ವೈದ್ಯರು ರಕ್ಷಿತಾ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಮೆದುಳು ನಿಷ್ಕ್ರಿಯಗೊಂಡು ಚಿಕ್ಕಮಗಳೂರಿನ ರಕ್ಷಿತಾ ಇಹಲೋಕ ತ್ಯಜಿಸಿದ್ದಾರೆ. ಅವರ ತಂದೆ-ತಾಯಿ ರಕ್ಷಿತಾಳ ಅಂಗಾಂಗ ದಾನ ಮಾಡಿದ್ದು, ಕುಟುಂಬದವರ ಈ ಮಹಾತ್ಕಾರ್ಯಕ್ಕೆ ನಾನು ಅಭಿನಂದಿಸುತ್ತೇನೆ. ಸಾವಿನಲ್ಲೂ ಸಾರ್ಥಕತೆ ಮೆರೆದ ವಿದ್ಯಾರ್ಥಿನಿ ರಕ್ಷಿತಾ ಕುರಿತು ಮಾತನಾಡಲು ಪದಗಳೇ ಸಾಲುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ದೊರಕಲಿ. #Rakshita pic.twitter.com/U0mzTVPHTe
— LR Shivarame Gowda (@LRSMandyaExMP) September 23, 2022
ಬಳಿಕ ರಕ್ಷಿತಾ ಮೃತದೇಹವನ್ನು ಆಕೆ ಓದುತ್ತಿದ್ದ ಚಿಕ್ಕಮಗಳೂರು ನಗರದ ಬಸವನಹಳ್ಳಿ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ನಡೆದ ದೃಶ್ಯ ನೋಡುಗರ ಮನಕಲುಕುವಂತಿತ್ತು. ತಂಗಿ ಸಾವಿನ ನೋವಿನಲ್ಲಿದ್ದ ರಕ್ಷಿತಾ ಸಹೋದರ ಮೃತದೇಹದ ಮುಂದೆ ಪುನೀತ್ ರಾಜ್‌ಕುಮಾರ್ ಅವರ ಗೊಂಬೆ ಹೇಳುತೈತೆ..ಮತ್ತೆ ಹೇಳುತೈತೆ ಹಾಡು ಹೇಳಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ನೆರೆದಿದ್ದ ಕಾಲೇಜು ಅಧ್ಯಾಪಕ ವೃಂದದವರು, ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಪುನೀತ್ ರಾಜ್‌ಕುಮಾರ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ಇನ್ನು ರಕ್ಷಿತಾ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ದಾವಣೆಗೆರೆಯಲ್ಲೂ ಅಪ್ಪು ಅಭಿಮಾನಿಯ ನೇತ್ರದಾನಇನ್ನು ನಿನ್ನೆ (ಸಪ್ಟೆಂಬರ್ 21) ದಾವಣಗೆರೆಯ ಪುನೀತ್ ರಾಜ್‌ಕುಮಾರ್ ಅವರು ಮೃತರಾಗಿದ್ದು, ಅವರು ಕೂಡ ಅಪ್ಪು ಮಾರ್ಗ ಅನುಸರಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ದಾವಣೆಗೆರೆಯ ಎಸ್.ಎಂ ಕೃಷ್ಣ ನಗರದ ಪುನೀತ್ ರಾಜ್‌ಕುಮಾರ್ ಅವರ ಅಪ್ಟಟ ಅಭಿಮಾನಿಯಾಗಿದ್ದ ಮಾರ್ಕೆಟ್ ರವಿ ಎನ್ನುವವರು ಹೃದಯಾಘಾತದಿಂದ ನಿಧನರಾಗಿದ್ದರು. ಮೊದಲಿನಿಂದಲೂ ಪುನೀತ್ ರಾಜ್‌ಕುಮಾರ್ ಅವರನ್ನು ಚಾಚು ತಪ್ಪದೆ ಪಾಲಿಸುತ್ತಿದ್ದ ಮಾರ್ಕೆಟ್ ರವಿ ಪುನೀತ್ ನಿಧನದ ನಂತರ ನೇತ್ರದಾನ ಮಾಡಲು ನಿರ್ಧರಿಸಿ,
ನೊಂದಣೆ ಮಾಡಿಸಿದ್ದರು. ನಿನ್ನೆ(ಸಪ್ಟೆಂಬರ್ 21) ಏಕಾಏಕಿ ಹೃದಯಾಘಾತದಿಂದ ರವಿ ನಿಧನರಾಗಿದ್ದು, ಅವರ ಆಸೆಯಂತೆ ಸ್ಥಳೀಯ ನೇತ್ರ ತಜ್ಜರು ರವಿ ನಿವಾಸಕ್ಕೆ ಭೇಟಿ ನೀಡಿದ ಆತನ ಕಣ್ಣುಗಳನ್ನು ಸಂರಕ್ಷಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಇಂದಿನ ಯುವ ಜನತೆಗೆ ಉತ್ತಮ ಸ್ಫೂರ್ತಿಯಾಗಿದ್ದು, ಕೇವಲ ರಕ್ಷಿತಾ, ರವಿ ಮಾತ್ರವಲ್ಲ ಇನ್ನೂ ಅನೇಕ ಅಪ್ಪು ಅಭಿಮಾನಿಗಳು ಸಾವಿನ ಬಳಿಕ ಅಂಗಾಗ ದಾನದಿಂದ ಅನೇಕರ ಬಾಳಿಗೆ ಬೆಳಕಾಗಿದ್ದಾರೆ.