ಮದುವೆ ಬಗ್ಗೆ ಇದ್ದ ವದಂತಿಗಳಿಗೆ ಸ್ಪಷ್ಟನೆ ನೀಡಿದ ಡಿಂಪಲ್ ಕ್ವೀನ್ ರಚಿತಾ ರಾಮ್
ಕೆಲ ದಿನಗಳಿಂದ ರಚಿತಾ ರಾಮ್ ಮದುವೆ ಬಗ್ಗೆ ಇಲ್ಲಸಲ್ಲದ ವದಂತಿ ಹಬ್ಬುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಚಿತಾ ರಾಮ್ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮದುವೆ ವದಂತಿಗಳ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆ ವದಂತಿ ಬಗ್ಗೆ ಬರೆದ ರಚಿತಾ, ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ವದಂತಿ ಬಗ್ಗೆ ಸ್ಪಷ್ಟನೆ ಕೊಡಲು ಬಯಸುತ್ತೇನೆ ಎಂದಿದ್ದಾರೆ.
ನನ್ನ ಸಿನಿಮಾ ಕುರಿತಾದ ವಿಷಯಗಳಾಗಲಿ, ಅಥವಾ ವೈಯಕ್ತಿಕ ವಿಷಯಗಳಾಗಲಿ, ನನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದಾಗ ಮಾತ್ರ ಅದು ಸತ್ಯವೆಂದು ಪರಿಗಣಿಸಿ. ಮನರಂಜನೆಗಾಗಿ ಸುಳ್ಳು ವದಂತಿಗಳನ್ನು ಸೃಷ್ಟಿ ಮಾಡಿದರೆ ನಿಮಗೆ ಖುಷಿ ಕೊಡಬಹುದು.
ಆದ್ರೆ, ಅದರಿಂದ ನನಗೆ ಹಾಗೂ ವದಂತಿಗಳಲ್ಲಿ ಸಿಲುಕಿದ ಸಂಬಂಧಪಟ್ಟ ವ್ಯಕ್ತಿಗಳಿಗೆ ಬೇಸರ ಉಂಟಾಗುತ್ತದೆ ಎಂಬ ವಿಷಯ ಅರ್ಥ ಮಾಡಿಕೊಂಡರೆ ಉತ್ತಮ ಎಂದಿದ್ದಾರೆ.
ಅತೀ ಮುಖ್ಯವಾದ ಸಂಗತಿ ಎಂದರೆ ಸದ್ಯಕ್ಕೆ ನನ್ನ ಮದುವೆ ನಿಶ್ಚಯವಾಗಿಲ್ಲ. ನಾನು ಮದುವೆ ಆಗುವ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ತಿಳಿಸಿ, ಎಲ್ಲರ ಸಮ್ಮುಖದಲ್ಲಿ, ಗುರುಹಿರಿಯರ ಆಶೀರ್ವಾದದೊಂದಿಗೆ ಆಗುತ್ತೇನೆ. ಸುಳ್ಳು ವದಂತಿಗಳನ್ನು ನಂಬಿ ವೈಯಕ್ತಿಕ ವಿಚಾರಗಳ ಬಗ್ಗೆ ನಗೆಪಾಟಲು ಮಾಡಿಕೊಳ್ಳಬೇಡಿ ಎಂದು ವಿನಮ್ರತೆಯಿಂದ ಕೇಳಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.