ಸಿನಿಮಾ ಹೀರೋಯಿನ್ ಎಂದರೆ ತೆಳ್ಳಗೆ..ಬೆಳ್ಳಗೆ ಇರಬೇಕು, ಎಕ್ಸ್ಪೋಸ್ ಮಾಡಬೇಕು, ಯಾವಾಗಲೂ ತೆರೆ ಮೇಲೆ, ತೆರೆ ಮರೆಯಲ್ಲಿ ತುಂಟುಬಟ್ಟೆ ಧರಿಸಬೇಕು ಎಂದೇ ಬಹಳ ಮಂದಿ ಅಂದುಕೊಳ್ಳುತ್ತಾರೆ. ಆದರೆ ನಮ್ಮ ಕನ್ನಡ ಚಿತ್ರರಂಗ ಸೇರಿದಂತೆ ಬಹುತೇಕ ಸಿನಿಮಾರಂಗದಲ್ಲಿ ಇದಕ್ಕೆ ವಿರುದ್ಧವಾದ ಎಷ್ಟೋ ನಟಿಯರು ಎಕ್ಸ್ಪೋಸ್, ಮೇಕಪ್ ಹೊರತುಪಡಿಸಿ ತಮ್ಮ ನಟನೆಯಿಂದಲೇ ದೊಡ್ಡ ಹೆಸರು ಮಾಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಎಷ್ಟೋ ಬಾರಿ ನಟಿಯರು ಬಾಡಿ ಶೇಮಿಂಗ್ಗೆ ಒಳಗಾಗಿದ್ದಾರೆ. ಇಂದಿಗೂ ಅದು ಮುಂದುವರೆಯುತ್ತಲೇ ಇದೆ. ಸಣ್ಣಗಿದ್ದ ನಟಿಯರು ಕಾರಣಾಂತರಗಳಿಂದ ದಪ್ಪ ಆಗಿ ಅವರ ಫೋಟೋ ಅಥವಾ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕರೆ ಸಾಕು, ಹೆಣ್ಣು ಎಂಬ ಗೌರವ ಇಲ್ಲದೆ, ತಮಗೆ ತೋಚಿದಂತೆ ಕಮೆಂಟ್ ಮಾಡುತ್ತಾರೆ. ಸ್ಯಾಂಡಲ್ವುಡ್ ನಟಿ ನೀತು ಶೆಟ್ಟಿ ಕೂಡಾ ಸಾಕಷ್ಟು ಬಾರಿ ಬಾಡಿ ಶೇಮಿಂಗ್ಗೆ ಗುರಿಯಾಗಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಪುಣ್ಯ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ನೀತು ಶೆಟ್ಟಿ ನಂತರ ಜಗ್ಗೇಶ್ ಹಾಗೂ ಕೋಮಲ್ ಜೊತೆಯಾಗಿ ಅಭಿನಯಿಸಿದ್ದ ಗೋವಿಂದ ಗೋಪಾಲ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದರು. ಅಲ್ಲಿಂದ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದರು. ಆದರೆ ಮೊದಲು ಬಿಡುಗಡೆಯಾಗಿದ್ದು ‘ಯಾಹೂ’ ಸಿನಿಮಾ. ಇದಾದ ನಂತರ ಜೋಕ್ ಫಾಲ್ಸ್, ಬೇರು, ಫೋಟೋಗ್ರಾಫರ್, ಪೂಜಾರಿ, ಕೋಟಿ ಚನ್ನಯ್ಯ, ಗಾಳಿಪಟ, ಗಣೇಶ ಮತ್ತೆ ಬಂದ, ಮನಸಾರೆ, ಪಂಚರಂಗಿ ಸೇರಿ ಅನೇಕ ಸಿನಿಮಾಗಳಲ್ಲಿ ನೀತು ನಟಿಸಿದರು. ಕಾಲಕ್ರಮೇಣ ಆರೋಗ್ಯ ಸಮಸ್ಯೆಯಿಂದ ನೀತು ದಪ್ಪ ಆದರು. ಅವರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರೆ ಅಲ್ಲಿ ಹೆಚ್ಚಿಗೆ ಕಂಡುಬಂದದ್ದು ಬಾಡಿಶೇಮಿಂಗ್ ಕಮೆಂಟ್ಗಳು. ಸಾಕಷ್ಟು ಬಾರಿ ಈ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ನೀತು ಇದೀಗ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ತಾವು ಭಾಗವಹಿಸಿದ್ದ ವಿಡಿಯೋ ಸ್ಕ್ರೀನ್ ಶಾಟ್ವೊಂದನ್ನು ಹಂಚಿಕೊಂಡಿರುವ ನೀತು, ”ಪ್ರತಿ ಬಾರಿ ಈ ಎಪಿಸೋಡ್ ಮರು ಪ್ರಸಾರ ಮಾಡಿದಾಗ ನಿಂದಕರು ಒಟ್ಟಿಗೆ ಕಮೆಂಟ್ಸ್ ಸೆಕ್ಷನ್ ಅಲ್ಲಿ ಸಿಗ್ತಾರೆ. ಇವರ ಪ್ರಕಾರ ತೆಳ್ಳಗಿಲ್ದೇ ಇರೋವ್ರು ಲೂಸ್ ಫಿಟ್ಟಿಂಗ್ ಮಾತ್ರ ಹಾಕೋಕೆ ಯೋಗ್ಯರು, ಇವರ ಪ್ರಕಾರ ದುಂಡಗಿರುವವರು ತುಂಬಾ ಮಜಾ ಮಾಡೋದ್ರಿಂದ ಹಾಗೆ ಆಗಿದ್ದಾರೆ, ಹಾಗಾಗಿ ಸೂ…..
ಅನ್ನೋ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡ್ತಾರೆ. ಇವರ ಪ್ರಕಾರ ‘ಪ್ಲಸ್ ಸೈಜ್’ ಇರುವವರ ಮೇಲೆ ಯಾರಿಗೂ ಪ್ರೀತಿ, ರೋಮ್ಯಾನ್ಸ್ ಹುಟ್ಟಲ್ಲ. ಅಂತವರನ್ನು ಬ್ಯೂಟಿಫುಲ್ ಅಂತ ಪರಿಗಣಿಸಬಾರದು, ಹಿಡಿoಬಾ/ ರಾಕ್ಷಸಿಯಾಗೋಕೆ ಮಾತ್ರ ನಾವು ಲಾಯಕ್, ಪ್ಲಸ್ ಸೈಜ್ನವರು ಜೀವನ ಪರ್ಯಂತ ದುಃಖದಲ್ಲಿ, ಡಯಟ್ ಹಾಗೂ ವರ್ಕೌಟ್ ಬಗ್ಗೆನೇ ಚಿಂತಿಸಿ, ತಗ್ಗಿ ಬಗ್ಗಿ ಸಮಾಜದಿಂದ ವಿಮುಖರಾಗಿ ಬದುಕಬೇಕು.
ಬೇರೆ ಯಾವ ವಿಷಯದ ಬಗ್ಗೆಯೂ ನಮಗೆ ಅಭಿಪ್ರಾಯ ಇರಲೇಬಾರದು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮದ ಎಪಿಸೋಡ್ ಲಿಂಕನ್ನು ಕೂಡಾ ನೀತು ಶೆಟ್ಟಿ ಈ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ‘ಈ ಫೋಟೋದಲ್ಲಿ ನಾನು ಮುದ್ದಾಗಿಯೇ ಕಾಣಿಸ್ತಿದ್ದೀನಿ’ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ ನೀತು. ‘ನೆಗೆಟಿವ್ ಕಮೆಂಟ್ಗಳಿಗೆ ತಲೆ ಕೆಡಿಸಿಕೊಳ್ಳಬೇಡಿ, ನಿಮಗೆ ಇಷ್ಟ ಬಂದಂತೆ ನೀವು ಜೀವಿಸಿ’ ಎಂದು ಅನೇಕ ಮಂದಿ ಈ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ.