ನಗು ಮೊಗದ ಒಡೆಯ ಅಪ್ಪು ಇಂದು ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾಗಿ ಸುಮಾರು ಐದು ತಿಂಗಳ ಮೇಲಾಗಿದೆ. ಆದರೆ ಅವರನ್ನು ದೊಡ್ಮನೆ ಕುಟುಂಬದ ಸದಸ್ಯರು, ಸಿನಿಮಾ ರಂಗದವರು ಹಾಗೂ ಅಭಿಮಾನಿಗಳು ನೆನಪಿಸಿಕೊಳ್ಳುತ್ತಿದ್ದಾರೆ. ಹೌದು, ಅವರ ವ್ಯಕ್ತಿತ್ವಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನಡೆ ನುಡಿಯಲ್ಲೂ ಅಪ್ಪುಗೆ ಸರಿ ಸರಿಸಾಟಿಯಾಗಬಲ್ಲ ವ್ಯಕ್ತಿ ಇನ್ನೊಬ್ಬರಿಲ್ಲ. ಅಷ್ಟೇ ಅಲ್ಲದೇ, ನಟ ಪುನೀತ್ ರಾಜ್ ಕುಮಾರ್ ಅವರ ಸಿನಿಮಾ ಬದುಕು, ಹಾಗೂ ವೈಯುಕ್ತಿಕ ಬದುಕು ಎಲ್ಲರಿಗೂ ಮಾದರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಾಲ ನಟನಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಬಾಲನಟನಾಗಿ, ಪ್ರೇಮದ ಕಾಣಿಕೆ, ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಭಾಗ್ಯವಂತರು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡರು.
ಆದಾದ ಬಳಿಕ 2002 ರ ವೇಳೆ ನಾಯಕ ನಟನಾಗಿ ಅಪ್ಪು ಮೊದಲ ಬಾರಿಗೆ ಸಿನಿಮಾದಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸಿನಿಮಾರಂಗದಲ್ಲಿ ನಟನಾಗಿ ಮಾತ್ರವಲ್ಲದೇ, ಗಾಯಕರಾಗಿ, ನಿರ್ಮಾಪಕರಾಗಿ ಹಾಗೂ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದ ಅಪ್ಪು ಇದೀಗ ನೆನಪಿನ ಬುತ್ತಿಯಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಕಿರುತೆರೆಲೋಕದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಶೋವನ್ನು ಅಚ್ಚುಕಟ್ಟಾಗಿ ನಿರೂಪಿಸುತ್ತಿದ್ದವರು ಪುನೀತ್ ರಾಜ್ ಕುಮಾರ್.
ಅಂದಹಾಗೆ, ಕನ್ನಡ ಕೋಟ್ಯಧಿಪತಿ ಶೋ ಸೂಪರ್ ಡೂಪರ್ ಹಿಟ್ ಆಗಲು ಮೂಲ ಕಾರಣವೇ ಅಪ್ಪು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನು, ಹಿಂದಿಯಲ್ಲಿ ಮೂಡಿಬಂದ ಕೌನ್ ಬನೇಗಾ ಕರೋಡ್ ಪತಿ ಕನ್ನಡದಲ್ಲಿ ಕನ್ನಡ ಕೋಟ್ಯಧಿಪತಿಯಾಗಿ ಜನಪ್ರಿಯತೆಯನ್ನು ಪಡೆದಿತ್ತು. 2012ರಲ್ಲಿ ಸ್ಟಾರ್ ಸುವರ್ಣ ವಾಹಿನಿ ಈ ಕಾರ್ಯಕ್ರಮವನ್ನು ಆರಂಭಿಸುವ ಮೂಲಕ ಮೂರು ಆವೃತ್ತಿಗಳನ್ನು ನಡೆಸಿತ್ತು. ಇದಾದ ನಂತರ 2019ರಲ್ಲಿ 4ನೇ ಸೀಸನ್ ಕಲರ್ಸ್ ಕನ್ನಡದಲ್ಲಿ ನಡೆಸಿತು. ಹೌದು, ಒಂದು ಮತ್ತು ಎರಡನೇ ಸೀಸನ್ ಅನ್ನು ಪುನೀತ್ ರಾಜ್‌ಕುಮಾರ್ ನಡೆಸಿಕೊಟ್ಟಿದ್ದರು.
ಆದರೆ 3ನೇ ಸೀಸನ್ ನ್ನು ಕಾರಣಾಂತರಗಳಿಂದಾಗಿ ಪುನೀತ್ ಅವರು ನಿರೂಪಣೆ ಮಾಡಲು ಸಾಧ್ಯವಾಗದೇ ಇದ್ದ ಕಾರಣ ರಮೇಶ್ ಅರವಿಂದ್ ನಿರೂಪಣೆ ಮಾಡಿದರು. ಆದಾದ ಬಳಿಕ 4ನೇ ಸೀಸನ್‌ಗೆ ಪುನಃ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡರು. ಹೀಗೆ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಯಶಸ್ಸಿನಲ್ಲಿ ಪುನೀತ್ ರಾಜ್ ಕುಮಾರ್ ಅವರ ಪಾತ್ರ ಅಗಾಧವಾಗಿದೆ. ಇದೀಗ ಪುನೀತ್ ರಾಜ್ ಕುಮಾರ್ ನಮ್ಮೊಂದಿಗೆ ದೈಹಿಕವಾಗಿ ಇಲ್ಲ. ಇನ್ನು, ಕನ್ನಡದ ಕೋಟ್ಯಾಧಿಪತಿ ಸೀಸನ್ 5 ಕ್ಕೆ ನಿರೂಪಕರಾಗಿ ಬೇರೆಯವರನ್ನು ಹುಡುಕಿಕೊಳ್ಳುವುದು ಅನಿವಾರ್ಯ.
ಸದ್ಯಕ್ಕೆ ರಮೇಶ್ ಅರವಿಂದ್ ಮತ್ತೆ ಕೋಟ್ಯಾಧಿಪತಿ ಜವಾಬ್ದಾರಿ ಹೊರುವುದು ಅನುಮಾನ ಎನ್ನಲಾಗಿದೆ. ಸದ್ಯಕ್ಕೆ ಮೂಡಿರುವ ಅನುಮಾನ ಕಿಚ್ಚಸುದೀಪ್ ಈ ಶೋನ ನಿರೂಪಣೆ ಮಾಡಲಿದ್ದಾರಾ ಎಂದು. ಹೌದು, ಪುನೀತ್ ರಾಜ್‌ಕುಮಾರ್ ಮತ್ತು ಸುದೀಪ್ ಬಾಲ್ಯದಿಂದಲೂ ಸ್ನೇಹಿತರು. ಹೌದು, ಸುದೀಪ್ ಅವರು ಕೋಟ್ಯಾಧಿಪತಿ ಕಾರ್ಯಕ್ರಮದ ಸಾರಥ್ಯವನ್ನು ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಅದೇನೇ ಇದ್ದರೂ ಅಧಿಕೃತ ಮಾಹಿತಿ ಹೊರ ಬೀಳುವ ತನಕ ಕಾದು ನೋಡಬೇಕು.