ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಬಾಲ್ಯದಲ್ಲಿ ವಡ್ ನಗರ ರೈಲ್ವೆ ಸ್ಟೇಷನ್ನಲ್ಲಿ ಚಹಾ ಮಾರುತ್ತಿದ್ದರು. ಅವರು ಅಂದು ಚಹಾ ಮಾರುತ್ತಿದ್ದ ಚಹಾ ಅಂಗಡಿ ಈಗಲೂ ಇದೆ. ಪ್ರಧಾನಿಯವರ ಜನ್ಮದಿನದ ಅಂಗವಾಗಿ ಈ ಚಹಾ ಅಂಗಡಿಯನ್ನು ಮ್ಯೂಸಿಯಂ ರೀತಿಯಲ್ಲಿ ಸಂರಕ್ಷಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಇದರಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೆ ಹಳೆಯ ಚಹಾ ಅಂಗಡಿಯನ್ನು ನೋಡುವ ಅವಕಾಶ ಸಿಗಲಿದೆ.ಹೌದು ಗುಜರಾತ್ನ ವಡ್ ನಗರ ಒಂದು ಐತಿಹಾಸಿಕ ನಗರವಾಗಿದ್ದು, ಇಂದು ಈ ನಗರವು ಪ್ರಧಾನಿ ನರೇಂದ್ರ ಮೋದಿಯವರ ತವರು ನೆಲವಾಗಿ ದೇಶ-ವಿದೇಶಗಳಲ್ಲಿ ಹೆಸರಾಗಿದೆ. ಈ ನಗರದ ಅಭಿವೃದ್ಧಿ ಮತ್ತು ಸೌಂದರ್ಯೀಕರಣಕ್ಕಾಗಿ ಸರ್ಕಾರ ವಿಶೇಷವಾದ ಯೋಜನೆಯೊಂದನ್ನು ರೂಪಿಸಿದೆ.
ಇದರ ಅಂಗವಾಗಿ ವಡ್ ನಗರ ರೈಲ್ವೆ ಸ್ಟೇಷನ್ ಅನ್ನು ಆಕರ್ಷಕ ಹಾಗೂ ಪ್ರೇಕ್ಷಣಿಯ ಸ್ಥಳವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿರುವ ವಡ್ ನಗರ ರೈಲ್ವೆ ಸ್ಟೇಷನ್ನಲ್ಲಿರುವ ಒಂದು ಪ್ರಸಿದ್ಧ ಚಹಾ ಅಂಗಡಿಯು ಪ್ರವಾಸಿಗರ ಪಾಲಿಗೆ ಬಹಳ ಆಕರ್ಷಣೆಯ ಕೇಂದ್ರವಾಗಿದೆ. ಈ ಚಹಾ ಅಂಗಡಿಯನ್ನು ಪ್ರಧಾನಿ ಮೋದಿಯವರ ತಂದೆ ಹಿಂದಿನ ಕಾಲದಲ್ಲಿ ಪ್ರಾರಂಭಿಸಿದ್ದರು. ಹೀಗಾಗಿ ಸಹಜವಾಗಿಯೇ ಈ ಅಂಗಡಿಯೊಂದಿಗೆ ಮೋದಿಯವರ ಬಾಲ್ಯದ ನೆನಪುಗಳು ಸಹ ಬೆಸೆದುಕೊಂಡಿವೆ.
ಪ್ರಧಾನಿ ನರೇಂದ್ರ ಮೋದಿಯವರು ಜನಿಸಿದ್ದು ಇದೇ ವಡ್ ನಗರದಲ್ಲಿ. ಅವರ ಸಂಪೂರ್ಣ ಬಾಲ್ಯ ಕಳೆದಿದ್ದು ಇದೇ ಊರಿನಲ್ಲಿ. ಸಾಮಾನ್ಯ ಕುಟುಂಬದವರಾಗಿದ್ದ ಮೋದಿಯವರಿಗೆ ಶಿಕ್ಷಣದಲ್ಲಿ ಬಹಳ ಆಸ್ಥೆ ಇತ್ತು. ಆದರೆ ಕುಟುಂಬವನ್ನು ನಡೆಸಲು ಅವರ ತಂದೆ ರೈಲ್ವೆ ಸ್ಟೇಷನ್ನಲ್ಲಿ ಚಹಾ ಅಂಗಡಿಯೊಂದನ್ನು ನಡೆಸುತ್ತಿದ್ದರು. ಬಾಲಕ ನರೇಂದ್ರ ಆಗ ಶಾಲೆ ಮುಗಿದ ನಂತರ ತಂದೆಗೆ ಸಹಾಯ ಮಾಡಲು ಚಹಾ ಅಂಗಡಿಗೆ ಹೋಗುತ್ತಿದ್ದರು. ಅಲ್ಲದೆ ಅವರೇ ಪ್ರಯಾಣಿಕರಿಗೆ ಚಹಾ ನೀಡುತ್ತಿದ್ದರು. ಆದರೆ ಇಂದು ಅವರು ಚಹಾ ಮಾರುತ್ತಿದ್ದ ಅಂಗಡಿಯನ್ನು ನೋಡಲೆಂದೇ ಪ್ರತಿದಿನ ಸಾವಿರಾರು ಜನ ಆಗಮಿಸುತ್ತಿದ್ದಾರೆ.ವಡ್ ನಗರ ಸ್ಟೇಷನ್ನಲ್ಲಿರುವ ಚಹಾ ಅಂಗಡಿಯು ಮೋದಿಯವರ ಬಾಲ್ಯದ ಕಷ್ಟದ ಪರಿಸ್ಥಿತಿಯನ್ನು ನಮ್ಮೆದುರು ತೆರೆದಿಡುತ್ತದೆ.