Shivam-super-catch

ಕೇವಲ 4 ಸೆಕೆಂಡಿನಲ್ಲಿ 25 ಮೀಟರ್ ಓಡಿ ಕ್ಯಾಚ್ ಪಡೆದ ಶಿವಂ ಮಾವಿ! ಮಿಲ್ಕಾ ಸಿಂಗ್ ಗೆ ಹೋಲಿಸಿದ ನೆಟ್ಟಿಗರು!

Entertainment/ಮನರಂಜನೆ

IND vs SL : ಪಂದ್ಯ ಕ್ರಿಕೆಟ್‌ನದ್ದಾಗಿತ್ತು, ಆದರೆ ಭಾರತದ ಶಿವಂ ಮಾವಿ ಅವರನ್ನು ನೋಡಿದಾಗ ಅವರು 100 ಮೀಟರ್ ಓಟಕ್ಕೆ ಬಂದಿದ್ದಾರೇನೋ ಅನಿಸಿತು! ಅವರು ಕ್ಯಾಚ್ ಹಿಡಿಯಲು ಬಹಳ ವೇಗವಾಗಿ ದೂರ ಓಡುತ್ತಿರುವಾಗ ಇದು ಎಲ್ಲರಿಗೂ ಅನಿಸಿದ ಸಂಗತಿ. ಶ್ರೀಲಂಕಾ ಇನಿಂಗ್ಸ್‌ನ 10ನೇ ಓವರ್ ನಡೆಯುತ್ತಿತ್ತು. ಚಹಾಲ್ ಬೌಲಿಂಗ್‌ನಲ್ಲಿದ್ದರು ಮತ್ತು ಶ್ರೀಲಂಕಾದ ಬ್ಯಾಟ್ಸ್‌ಮನ್ ಅಸಲಂಕಾ ಸ್ಟ್ರೈಕ್‌ನಲ್ಲಿದ್ದರು. ಈ ಓವರ್‌ನ ಮೂರನೇ ಎಸೆತದಲ್ಲಿ ಅಸಲಂಕಾ ಶಾಟ್ ಬಾರಿಸಿದ್ದು, ನಂತರ ಕಂಡು ಬಂದ ದೃಶ್ಯ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಕಳೆದ ಬಾರಿ ಮಾಡಿದ ತಪ್ಪು ಮಾಡದ ನಾಯಕ ಹಾರ್ಧಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು, ಆದರೆ ಮೊದಲ ಓವರ್ ನಲ್ಲಿಯೇ ಯುವ ಬ್ಯಾಟ್ಸಮನ್ ಇಶಾನ್ ಕಿಶನ್ ಅವರ ವಿಕೆಟ್ ಕಳೆದುಕೊಂಡ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ತಮ್ಮ ವೃತ್ತಿ ಜೀವನದ ಕೇವಲ ಎರಡನೇ ಪಂದ್ಯವಾಡಿದ ರಾಹುಲ್ ತ್ರಿಪಾಟಿ ಸಮಾದಾನಕರ ಆಟವಾಡಿದರು.

ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ತ್ರಿಪಾಟಿ ಇಂದಿನ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಗಳ ಸಹಾಯದಿಂದ 218.75 ಸ್ಟ್ರೈಕ್ ರೇಟ್ ನಲ್ಲಿ 35 ರನ್ ಗಳಿಸಿ ಔಟ್ ಆದರು. ತ್ರಿಪಾಟಿ ವಿಕೆಟ್ ಬಿದ್ದ ನಂತರ ಕ್ರೀಸ್ ಗೆ ಇಳಿದ ಸೂರ್ಯಕುಮಾರ್ ಯಾದವ್ ಅವರು ಆರಂಭದಿಂದಲೇ ತಮ್ಮ ವಿಸ್ಪೋಟಕ ಬ್ಯಾಟಿಂಗ್ ಆರಂಭಿಸಿ ಲಂಕಾ ಬೌಲರ್ ಗಳನ್ನು ಚೆಂಡಾಡತೊಡಗಿದರು.

ಇವರಿಗೆ ಆರಂಭಿಕ ಬ್ಯಾಟ್ಸಮನ್ ಶುಭಮನ್ ಗಿಲ್ ಅವರು ಉತ್ತಮ ಸಾಥ್ ನೀಡಿದರು, 36 ಎಸೆತಗಳಲ್ಲಿ 2 ಬೌಂಡರಿ ಹಾಗೂ ಮೂರು ಸಿಕ್ಸರ್ ಗಳ ಸಹಾಯದಿಂದ 46 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಶುಭಮನ್ ಅವರು ಲಂಕಾ ಸ್ಪಿನ್ನರ್ ವನಿಂದು ಹಸರಂಗ ಅವರ ಓವರ್ ನಲ್ಲಿ ಕ್ಲೀನ್ ಬೋಲ್ಡ್ ಆಗಿ ಚೊಚ್ಚಲ ಟಿ-20 ಅರ್ಧ ಶತಕದಿಂದ ವಂಚಿತರಾದರು.

ಇವರ ನಂತರ ಬಂದ ನಾಯಕ ಪಾಂಡ್ಯ ಹಾಗೂ ದೀಪಕ್ ಹೂಡಾ ತಲಾ 4 ರನ್ ಗಳಿಸಿ ದೊಡ್ಡ ಹೊಡೆತಗಳಿಗೆ ಕೈ ಹಾಕಿ ಕೈಸುಟ್ಟುಕೊಂಡರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಸಹ ಮತ್ತೊಂದೆಡೆ ಒಂಟಿ ಸಲಗನಂತೆ ಹೋರಾಡುತ್ತಿದ್ದ ಸೂರ್ಯಕುಮಾರ್ ಯಾದವ್ ಕೊನೆಯ ಓವರ್ ವರೆಗೂ ಬ್ಯಾಟಿಂಗ್ ಮಾಡಿ ಕೇವಲ 51 ಎಸೆತಗಳಲ್ಲಿ 112 ರನ್ ಬಾರಿಸಿ ಲಂಕಾ ದಹನ ಮಾಡಿದರು. ಸೂರ್ಯನ ಬ್ಯಾಟ್ ನಿಂದ ಇಂದಿನ ಪಂದ್ಯದಲ್ಲಿ ಬರೋಬ್ಬರಿ 9 ಸಿಕ್ಸರ್ ಹಾಗೂ 7 ಬೌಂಡರಿ ಮೂಡಿಬಂದಿವೆ.

ಸೂರ್ಯನ 112 ರನ್ ಗಳಲ್ಲಿ ಬರೋಬ್ಬರಿ 82 ರನ್ ಕೇವಲ ಬೌಂಡರಿ ಸಿಕ್ಸರ್ ಗಳ ಸಹಾಯದಿಂದ ಮೂಡಿಬಂದಿದ್ದು ವಿಶೇಷವಾಗಿತ್ತು. ಲಂಕಾದ ಯಾವುದೇ ಬೌಲರ್ ಗಳಿಗೂ ಮುಲಾಜು ತೋರದ ಸೂರ್ಯ ಮೈದಾನದ ಮೂಲೆ ಮೂಲೆಗೂ ಚೆಂಡು ಅಟ್ಟಿದರು! ಇವರೊಟ್ಟಿಗೆ ಕಳೆದ ಪಂದ್ಯದ ಹೀರೊ ಅಕ್ಷರ್ ಪಟೇಲ್ ಅವರು ಸಹ ಕೇವಲ 9 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ 21 ರನ್ ಗಳಿಸಿ ತಂಡದ ಮೊತ್ತ 228 ತಲುಪಲು ಸಹಾಯಕವಾದರು.

ಸೂರ್ಯಕುಮಾರ್ ಯಾದವ್ ಅವರ ಈ ಶತಕ ಭಾರತದ ಪರವಾಗಿ ಅತೀ ವೇಗದ ಶತಕ ಬಾರಿಸಿದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಈ ಮೊದಲು ಸೂರ್ಯ 49 ಎಸೆತಗಳಲ್ಲಿ ಶತಕ ಬಾರಿಸಿ ಮೂರನೇ ಸ್ಥಾನದಲ್ಲಿದ್ದರು. ಇಂದಿನ ಪಂದ್ಯದಲ್ಲಿ 45 ಎಸೆತಗಳಲ್ಲಿ ಶತಕ ಬಾರಿಸಿ ಟಾಪ್-2 ಸ್ಥಾನ ಅಲಂಕರಿಸಿದ್ದಾರೆ, ಟಾಪ್-1 ರಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿದ ಹಿಟ್ ಮ್ಯಾನ್ ರೋಹಿತ್ ಶರ್ಮಾರವರಿದ್ದರೆ,  ಕನ್ನಡಿಗ ಕೆ.ಎಲ್.ರಾಹುಲ್ ಅವರು 46 ಎಸೆತಗಳಲ್ಲಿ ಶತಕ ಬಾರಿಸಿ ಮೂರನೇ ಸ್ಥಾನದಲಿದ್ದಾರೆ.

ಭಾರತ ನೀಡಿದ್ದ 229 ರನ್ ಗಳ ಬೃಹತ್ ಗುರಿ ಬೆನ್ನಟ್ಟಿದ ಲಂಕಾ ತಂಡ ಕೊಂಚ ಉತ್ತಮ ಆರಂಭ ಪಡೆದಿತ್ತು, ಆದರೆ ಪವರ್ ಪ್ಲೇನಲ್ಲಿಯೇ ಬೌಲಿಂಗ್ ಮಾಡಲು ಬಂದ ಸ್ಪಿನ್ನರ್ ಅಕ್ಷರ್ ಪಟೇಲ್ ಅವರು ಉತ್ತಮವಾಗಿ ಆಡುತ್ತಿದ್ದ ಕುಸಾಲ್ ಮೆಂಡಿಸ್ (23 ರನ್) ಅವರ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇವರ ನಂತರ ಲಂಕಾ ತಂಡ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಲಂಕಾ ಪರವಾಗಿ ಪಾತಮ್ ನಿಸ್ಸಂಕ 15 ರನ್, ಭಾನುಕ ರಾಜಪಕ್ಷ ಅವರ ಸ್ಥಾನದಲ್ಲಿ ತಂಡ ಸೇರಿಕೊಂಡ ಆವಿಷ್ಕಾ ಫೆರ್ನಾಂಡೋ ಅವರು ಕೇವಲ ಕೇವಲ 1 ರನ್ ಗಳಿಸಿ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.

ನಂತರ ಚಮಿಕ ಅಸಲಂಕಾ ಅವರು 19 ರನ್ ಗಳಿಸಿ ಚಹಾಲ್ ಓವರ್ ನಲ್ಲಿ ಶಿವಂ ಮಾವಿ ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾಗಿ ಔಟ್ ಆದರೆ, ನಂತರ ಉತ್ತಮವಾಗಿ ಆಡುತ್ತಿದ್ದ ಧನಂಜಯ ಡಿಸಿಲ್ವ ಅವರು ಸಹ ಯಜ್ಜಿ ಚಹಾಲ್ ಗೆ ಬಲಿಯಾದರು. ಮೊದಲ ಪಂದ್ಯದಲ್ಲಿ ಭಾರತದ ಬೌಲರ್ ಗಳಿಗೆ ಟಫ್ ಕಾಂಪಿಟೇಷನ್ ಕೊಟ್ಟು ಶಿವಂ ಮಾವಿಗೆ ವಿಕೆಟ್ ಒಪ್ಪಿಸಿದ್ದ ವನಿಂದು ಹಸರಂಗ 9 ರನ್ ಗಳಿಸಿ ಔಟ್ ಆದರು, ಕರುಣರತ್ನೆ ಹಾಗೂ ಮಹಿಷ ತೀಕ್ಷಣ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.

ಲಂಕಾ ಪಡೆಗೆ ಕೊನೆಯ ಭರವಸೆ ಆಗಿದ್ದ ನಾಯಕ ದಸುನ್ ಶನಕ ಅವರು ಬೃಹತ್ ಟಾರ್ಗೆಟ್ ಇದ್ದ ಕಾರಣ ಹೊಡೆಯಲೇಬೇಕಾದ ಅನಿವಾರ್ಯತೆಗೆ ಬಿದ್ದರು. ಈ ತರಾತುರಿಯಲ್ಲಿ ಅರ್ಶದೀಪ್ ಸಿಂಗ್ ಅವರ ಓವರ್ ನಲ್ಲಿ ಔಟ್ ಆಗುವ ಮೂಲಕ ಲಂಕಾ ತಂಡ ಸೋಲು ಒಪ್ಪಿಕೊಂಡಿತು, ಕೊನೆಯಲ್ಲಿ ಶ್ರೀಲಂಕಾ 16.4 ಓವರ್ ಗಳಲ್ಲಿ 137 ರನ್ ಗೆ ಆಲೌಟ್ ಆಗಿ 91 ರನ್ ಗಳ ಭಾರೀ ಅಂತರದ ಸೋಲು ಒಪ್ಪಿಕೊಂಡಿತು.

ಭಾರತದ ಪರವಾಗಿ ಅರ್ಶದೀಪ್ ಸಿಗ್ ಮೂರು ವಿಕೆಟ್ ಪಡೆದರೆ, ಚಹಾಲ್, ಉಮ್ರಾನ್ ಮಲೀಕ್ ಹಾಗೂ ನಾಯಕ ಹಾರ್ಧಿಕ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದು ಮಿಂಚುವುದರ ಜೊತೆಗೆ ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು, ಸರಣಿಯುದ್ದಕ್ಕೂ ಅವರ ಆಲ್ರೌಂಡ್ ಪ್ರದರ್ಶನ ಅದ್ಭುತವಾಗಿತ್ತು. ಇಂಥ ಆಟಗಳ ಕಾರಣಕ್ಕಾಗಿಯೇ ಭಾರತ ತಂಡ ಹಾಲಿ ಸರಣಿಯನ್ನು 2-1 ರಿಂದ ತನ್ನದಾಗಿಸಿಕೊಂಡಿತು. ಇನ್ನು ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದ ಸೂರ್ಯನ ಬಗ್ಗೆ ಹೇಳುವುದೇ ಬೇಡ, ಒಂದೊಂದು ಶಾಟ್ ಅದ್ಭುತವಾಗಿದ್ದವು.

ಇನ್ನು ವಿಶೇಷವಾಗಿ ನಿನ್ನೆ ಕ್ಯಾಚ್ ಹಿಡಿಯಲು ಶಿವಂ ಮಾವಿ ಮಿಲ್ಕಾ ಸಿಂಗ್ ಆದರು. ಮಾವಿ ರಾಜ್ ಕೋಟ್ ಮೈದಾನದಲ್ಲಿ ಕ್ರಿಕೆಟ್ ಆಡಲು ಇಳಿದು ಬಂದಿಲ್ಲ, 100 ಮೀಟರ್ ಓಟದಲ್ಲಿ ನಾಗಾಲೋಟ ಮಾಡುತ್ತಿದ್ದರು. ಅಸಲಂಕಾ 10 ನೇ ಓವರ್‌ನ ಮೂರನೇ ಎಸೆತದಲ್ಲಿ ಶಾಟ್ ಆಡಿದಾಗ, ಮಾವಿ ಡೀಪ್ ಕವರ್‌ನಿಂದ ಎಡಕ್ಕೆ ಓಡಲು ಪ್ರಾರಂಭಿಸಿದರು. ಅವರು ದೀರ್ಘ ಓಟದ ಮೂಲಕ ಅಸಲಂಕಾ ಅವರ ಕ್ಯಾಚ್ ಪಡೆದರು.

ರಾಜ್‌ಕೋಟ್‌ನಲ್ಲಿ ಕ್ಯಾಚ್ ಹಿಡಿಯಲು ಶಿವಂ ಮಾವಿ ಎಷ್ಟು ದೂರ ಕ್ರಮಿಸಿದರು ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಅಂದಾಜಿನ ಪ್ರಕಾರ ಅವರು ಸುಮಾರು 25 ರಿಂದ 30 ಮೀಟರ್ ದೂರವನ್ನು ಕ್ರಮಿಸಿರಬೇಕು, ಅದೂ ಕೂಡ ಕೇವಲ 4 ಸೆಕೆಂಡಿನಲ್ಲಿ ಮಾತ್ರ! ಈ ಪಂದ್ಯದಲ್ಲಿ ಶಿವಂ ಮಾವಿ ಹಿಡಿದ ಕ್ಯಾಚ್ ಪ್ರಚಂಡ ಕ್ಯಾಚ್ ಆಗಿತ್ತು. ಈ ಕ್ಯಾಚ್‌ನೊಂದಿಗೆ ಚಾಹಲ್ ಪಂದ್ಯದಲ್ಲಿ ತಮ್ಮ ವಿಕೆಟ್‌ಗಳ ಖಾತೆ ತೆರೆದರು.

ಅವರ ಅದ್ಭುತ ಕ್ಯಾಚ್ ವಿಡಿಯೊ ಕೆಳಗಿದೆ ನೋಡಿ…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.