ಕನ್ನಡ ಕಲಿಯುವುದು ಹೇಗೆ ? ಕನ್ನಡ ಒಂದು ಸುಂದರ ಭಾಷೆ : ಟ್ವೀಟ್ ಮಾಡಿದ ನರೇಂದ್ರ ಮೋದಿಜಿ

ಕನ್ನಡ ಭಾಷೆ ಅತ್ಯಂತ ಸುಂದರ ಭಾಷೆ, ಕನ್ನಡ ವರ್ಣಮಾಲೆಯನ್ನು ಮಕ್ಕಳು ಸುಲಭವಾಗಿ, ವಿನೋದವಾಗಿ ಹೇಗೆ ಕಲಿಯಬಹುದು ಎಂದು ಕಲೆಗಾರ ಬಾದಲ್ ನಂಜುಂಡಸ್ವಾಮಿ ಪ್ರತಿ ಅಕ್ಷರಕ್ಕೆ ಚಿತ್ರಗಳನ್ನು ಜೋಡಿಸಿ ತೋರಿಸಿಕೊಟ್ಟಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಎಸ್‌.ಕಿರಣ್‌ ಕುಮಾರ್‌ ಎಂಬುವರು ಸಚಿತ್ರ ವರ್ಣಮಾಲಾ ಅಕ್ಷರಗಳ ಫೋಟೋ ಟ್ವೀಟ್‌ ಮಾಡಿ, ’49ರಲ್ಲಿ 46 ಚಿತ್ರಗಳು ಸುಳಿವುಗಳನ್ನು ಹೊಂದಿವೆ. ಮಕ್ಕಳಿಗೆ ಕನ್ನಡ ವರ್ಣಮಾಲೆಗಳನ್ನು ಕಲಿಸುವ ಅದ್ಭುತ ವಿಧಾನ. ನೀವು ಎಷ್ಟು ಊಹಿಸಬಹುದು? 40ಕ್ಕಿಂತ ಕಡಿಮೆಯಿದ್ದರೆ ಕಳವಳಕಾರಿ’ ಎಂದು ಟ್ವೀಟ್‌ ಮಾಡಿದ್ದರು.

ಅವರು ಲಗತ್ತಿಸಿದ್ದ ಚಿತ್ರದಲ್ಲಿ ಅ ಅಕ್ಷರದಲ್ಲೇ ಅಳಲು, ಆ ಅಕ್ಷರದಲ್ಲಿ ಆನೆ- ಹೀಗೆ 46 ಅಕ್ಷರಗಳು ಚಿತ್ರದಲ್ಲೇ ಪದಗಳ ಸುಳಿವು ನೀಡುತ್ತಿದ್ದವು. ಇದನ್ನು ಟ್ವೀಟರ್‌ನಲ್ಲಿ ಶ್ಲಾಘಿಸಿರುವ ಮೋದಿ, ‘ಭಾಷೆಗಳನ್ನು ಕಲಿಯುವುದನ್ನು ಮೋಜಿನ ಚಟುವಟಿಕೆಯನ್ನಾಗಿ ಮಾಡುವ ಸೃಜನಶೀಲ ವಿಧಾನ, ಈ ಸಂದರ್ಭದಲ್ಲಿ ಸುಂದರವಾದ ಕನ್ನಡ ಭಾಷೆ’ ಎಂದು ಟ್ವೀಟ್‌ ಮಾಡಿದ್ದಾರೆ. ಕಿರಣ್ ಕುಮಾರ್ ಎಸ್ ತಮ್ಮ ಟ್ವೀಟ್‌ನಲ್ಲಿ ಅ-ಅಳಿಲು, ಆ-ಆನೆ, ಇ-ಇಲಿ, ಈ-ಈರುಳ್ಳಿ, ಉ-ಉಂಗುರ, ಎ-ಎಲೆ, ಏ-ಏಣಿ, ಒ-ಒಂಟೆ, ಕ-ಕಣ್ಣು, ಖ-ಖಡ್ಗ, ಗ-ಗಡಿಯಾರ, ಘ-ಘಂಟೆ, ಚ-ಚರಕ, ತ-ತಬಲ, ದ-ದಂತ, ಹ-ಹಣತೆ ಈ ಮಾದರಿಯಲ್ಲಿ ಕನ್ನಡ ಭಾಷೆ ಕಲಿಯಬಹುದು ಎಂದು ಚಿತ್ರದ ಸಹಿತ ವಿವರಿಸಿದ್ದರು.

ತಮ್ಮ ಕಲೆಯನ್ನು ಭಾರತದ ಪ್ರಧಾನಿ ಗುರುತಿಸಿದ ಬಗ್ಗೆ ನಂಜುಂಡಸ್ವಾಮಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಕನ್ನಡವನ್ನು ಕಡೆಗಣಿಸುತ್ತಿದೆ, ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆರೋಪಗಳ ನಡುವೆಯೇ ಈ ಟ್ವೀಟ್ ಗಮನ ಸೆಳೆಯುತ್ತಿದೆ.

You might also like

Comments are closed.