
ಕುಂದಾಪುರ: ಆಹಾರ ಹುಡುಕಿ ನಾಡಿಗೆ ಬಂದಿದ್ದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕುಂದಾಪುರದ ಸೌಕೂರು ದೇವಸ್ಥಾನ ಬಳಿ ನಡೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಚಿರತೆ ರಕ್ಷಣೆ ಕಾರ್ಯ ಮಾಡಿದ್ದಾರೆ.
ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ದೇವಸ್ಥಾನ ಸಮೀಪದ ನಿವಾಸಿಯೊಬ್ಬರ ಮನೆಯ ಬಾವಿಗೆ ಚಿರತೆ ಬಿದ್ದಿದೆ. ತಕ್ಷಣ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಕುಂದಾಪುರ ವಲಯ ಅರಣ್ಯಾಧಿಕಾರಿಗಳು ಹಾಗೂ ನೇರಳಕಟ್ಟೆಯ ಅಧಿಕಾರಿ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬಂದಿದ್ದರು.
ಮೊದಲಿಗೆ ಬುಟ್ಟಿ ಇಳಿಸಿ ಚಿರತೆಯನ್ನು ಅದರ ಮೇಲೆ ಕೂರುವಂತೆ ಮಾಡಿದ್ದು ಬಳಿಕ ಬೋನನ್ನು ಇಳಿಸಿ ಚಿರತೆ ಅದರೊಳಕ್ಕೆ ಹೋದ ನಂತರ ನಾಜೂಕಾಗಿ ಮೇಲಕ್ಕೆತ್ತಿ ರಕ್ಷಣೆ ಮಾಡಲಾಯಿತು. 2 ವರ್ಷ ಪ್ರಾಯದ ಹೆಣ್ಣು ಚಿರತೆ ಇದಾಗಿದ್ದು ಆರೋಗ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments are closed.