ದೇಶದ ಕೆಲವು ಜನರಿಗೆ ಈಗಲೂ ಹೆಲ್ಮೆಟ್ ಮಹತ್ವದ ಬಗ್ಗೆ ತಿಳಿದಿಲ್ಲ. ಪೊಲೀಸರ ದಂಡಾಸ್ತ್ರದಿಂದ ತಪ್ಪಿಸಿಕೊಳ್ಳಲು ಬಲವಂತವಾಗಿ ಹೆಲ್ಮೆಟ್ ಧರಿಸುವವರು ಇದ್ದಾರೆ. ಇನ್ನು ಕೆಲವರು ಕೇಶ ಶೈಲಿ ಹಾಳಾಗುತ್ತದೆ ಅಂತಾ ಹೆಲ್ಮೆಟ್ ನಿರ್ಲಕ್ಷ್ಯ ಮಾಡುವವರನ್ನು ನೋಡಿದ್ದೇವೆ. ಆದರೆ, ಹೆಲ್ಮೆಟ್ ನಮ್ಮ ಜೀವ ಉಳಿಸುವ ಸಾಧನ ಎಂಬುದು ಇನ್ನು ಕೆಲವು ಮಂದಿಗೆ ತಿಳಿದೇ ಇಲ್ಲ. ಆದರೆ, ಈ ಪ್ರಸ್ತುತ ವೈರಲ್ ಆಗಿರುವ ವಿಡಿಯೋ ನೋಡಿದರೆ, ಖಂಡಿತವಾಗಿಯೂ ಹೆಲ್ಮೆಟ್ ಮಹತ್ವ ಏನೆಂಬುದನ್ನು ತಿಳಿದೇ ತಿಳಿಯುತ್ತದೆ.
ಹೌದು, ಹೆಲ್ಮೆಟ್ ಧರಿಸಿದ್ದರಿಂದ ಬೈಕ್ ಸವಾರನ ಪ್ರಾಣ ಒಂದೇ ಸಮಯದಲ್ಲಿ ಎರಡು ಬಾರಿ ಉಳಿದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಹೆಲ್ಮೆಟ್ ಅಭಿಯಾನದ ಭಾಗವಾಗಿ ದೆಹಲಿ ಪೊಲೀಸರು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡುವ ಮೂಲಕ ಹೆಲ್ಮೆಟ್ ಮಹತ್ವವನ್ನು ಸಾರಿದ್ದಾರೆ. ಸದ್ಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?
ವೇಗವಾಗಿ ಬರುವ ಬೈಕ್ಗೆ ಕಾರೊಂದು ಅಡ್ಡಿಯಾದಾಗ ವಿಚಲಿತಗೊಂಡು ಬೈಕ್ ನಿಯಂತ್ರಣ ಕಳೆದುಕೊಳ್ಳುವ ಸವಾರ, ಬೈಕ್ ಸಮೇತ ಕೆಳಗೆ ಬೀಳುತ್ತಾನೆ. ಬಿದ್ದ ರಭಸಕ್ಕೆ ಎರಡ್ಮೂರು ಮೀಟರ್ಗಳಷ್ಟು ಬೈಕ್ ಸಮೇತ ಸವಾರ ಉಜ್ಜಿಕೊಂಡು ಹೋಗುತ್ತಾನೆ. ಈ ವೇಳೆ ಅಲ್ಲಿಯೇ ಇದ್ದ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಕಂಬ ಕುಸಿದು, ನೇರವಾಗಿ ಬೈಕ್ ಸವಾರನ ಮೇಲೆ ಬೀಳುತ್ತದೆ. ಎದ್ದು ನಿಂತಿದ್ದ ಸವಾರ ಕಂಬ ಬಿದ್ದ ರಭಸಕ್ಕೆ ಮತ್ತೆ ಕುಸಿದು ಬಿದ್ದು, ಮತ್ತೆ ಏಳುತ್ತಾನೆ.
ಅದೃಷ್ಟವಶಾತ್ ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದರಿಂದ ಒಂದೇ ಸಮಯದಲ್ಲಿ ಸಂಭವಿಸಿದ ಎರಡು ಅಪಘಾತದಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾನೆ. ಹೆಲ್ಮೆಟ್ ಇಲ್ಲದೇ ಹೋಗಿದ್ದರೆ, ಬೈಕ್ ಸವಾರ ಸಾಯುವ ಸಾಧ್ಯತೆ ಇತ್ತು. ಇದೀಗ ಈ ವಿಡಿಯೋವನ್ನು ಹೆಲ್ಮೆಟ್ ಬಗ್ಗೆ ಅರಿವು ಮೂಡಿಸಲೆಂದು ದೆಹಲಿ ಪೊಲೀಸರು ಟ್ವಿಟರ್ನಲ್ಲಿ ಶೇರ್ ಮಾಡಿದ್ದು, ಹೆಲ್ಮೆಟ್ ಧರಿಸುವುದರಿಂದ ಒಂದಲ್ಲ, ಎರಡಲ್ಲ ಅನೇಕ ಬಾರಿ ಜೀವ ಉಳಿಸುತ್ತದೆ ಎಂದು ಅಡಿಬರಹ ಬರೆದುಕೊಂಡಿದ್ದಾರೆ.
ನಿನ್ನೆಯಷ್ಟೇ ಶೇರ್ ಆಗಿರುವ ವಿಡಿಯೋ 1 ಮಿಲಿಯನ್ಗೂ ಅಧಿಕ ವೀಕ್ಷಣೆ ಕಂಡಿದೆ. 26 ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು 5 ಸಾವಿರಕ್ಕೂ ಅಧಿಕ ರೀಟ್ವೀಟ್ ಮಾಡಲಾಗಿದೆ. ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪೂರ್ಣ ಮುಖವನ್ನು ಮುಚ್ಚುವ ಹೆಲ್ಮೆಟ್‌ಗಳನ್ನು ಸರಿಯಾಗಿ ಧರಿಸಿದರೆ, ಮಾರಣಾಂತಿಕ ಗಾಯಗಳನ್ನು ಶೇಕಡಾ 64 ರಷ್ಟು ಮತ್ತು ಮೆದುಳಿನ ಗಾಯಗಳನ್ನು ಶೇಕಡಾ 74 ರಷ್ಟು ಕಡಿಮೆ ಮಾಡಬಹುದು ಎಂದು ಹೇಳಿದೆ.
God helps those who wear helmet !#RoadSafety#DelhiPoliceCares pic.twitter.com/H2BiF21DDD
— Delhi Police (@DelhiPolice) September 15, 2022