ಕಳೆದ ವರ್ಷ ಪ್ರೀತಿ ಪ್ರೇಮ ಮದುವೆ ವಿಚಾರವಾಗಿ ಸುದ್ದಿಯಾಗಿದ್ದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ(Haripriya) ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷ ನಟಿ ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು. ಮೂಗು ಚುಚ್ಚಿಸಿಕೊಂಡಿರುವ ವಿಡಿಯೋವನ್ನು ಅವರೇ ತನ್ನ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋಗೆ ಭಾವನಾತ್ಮಕವಾಗಿ ಬೊಟ್ಟಿನ ಬಗ್ಗೆ ಬರೆದುಕೊಂಡಿದ್ದರು.
ಅದಲ್ಲದೇ ಈ ವಿಡಿಯೋದಲ್ಲಿ ನಟರೊಬ್ಬರರು ನಟಿಯ ಪಕ್ಕ ಇರುವುದು ಕಂಡು ಬಂದಿತ್ತು. ಕೊನೆಗೆ ಕಂಚಿನ ಕಂಠದಿಂದಲೇ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ನಟ ವಸಿಷ್ಠ ಸಿಂಹರವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಎನ್ನಲಾಗಿತ್ತು. ಕೊನೆಗೂ ಚಂದನವನದ ಈ ಜೋಡಿ ಎಂಗೇಜ್ ಮೆಂಟ್ ಮಾಡಿಕೊಳ್ಳುವ ಮೂಲಕ ಅಧಿಕೃತ ಗೊಳಿಸಿದ್ದರು.
ಆದರೆ ಜನವರಿ 26 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಕೊನೆಗೆ ಈ ಜೋಡಿ ಸತಿ ಪತಿಗಳಾಗಿದ್ದಾರೆ. ಇನ್ನು ಚಂದನವನದ ಮುದ್ದಾದ ಜೋಡಿಯ ಮದುವೆಯ ಸಿದ್ಧತೆ ಸೇರಿದಂತೆ ಮದುವೆಯೂ ಹೇಗೆ ನಡೆಯಿತು ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಈ ಜೋಡಿಯ ಚಂದನವನದ ನಟ ವಸಿಷ್ಠ ಸಿಂಹ(Vasishta Simha) ಹಾಗೂ ನಟಿ ಹರಿಪ್ರಿಯಾರವರು ಸಾಂಸ್ಕೃತಿಕ ನಗರಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆಯಾಗಿದ್ದಾರೆ. ಈ ಜೋಡಿಯ ಮದುವೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ್, ಅಮೃತಾ ಅಯ್ಯಂಗಾರ್ ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ, ಸತೀಶ್ ನೀನಾಸಂ ಸೇರಿದಂತೆ ಅನೇಕ ಕಲಾವಿದರು ಆಗಮಿಸಿದ್ದರು.
ಇನ್ನು, ಜನವರಿ 28 ರಂದು ಈ ಜೋಡಿಯ ರಿಸೆಪ್ಷನ್ ಬೆಂಗಳೂರಿನ ದಾಸನಪುರದ ಬಳಿಯ ಖಾಸಗಿ ರೆಸಾರ್ಟ್ನಲ್ಲಿ ನಡೆಯಿತು. ಚಂದನವನದ ಕ್ಯೂಟ್ ಜೋಡಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ಗಣ್ಯರು ಆಗಮಿಸಿದ್ದರು. ಗೋಲ್ಡನ್ ಸ್ಟಾರ್ ಗಣೇಶ್, ಅಮೂಲ್ಯ ದಂಪತಿ, ರಿಯಲ್ ಸ್ಟಾರ್ ಉಪೇಂದ್ರ ದಂಪತಿ, ಗಿರಿಜಾ ಲೋಕೇಶ್, ಮಾಲಾಶ್ರೀ, ಹಿರಿಯ ನಟ ರಮೇಶ್ ಅರವಿಂದ್, ಅವಿನಾಶ್ ಮಾಳವಿಕ ದಂಪತಿ, ಶ್ರೀನಾಥ್ ದಂಪತಿ ಸೇರಿದಂತೆ ಅನೇಕ ಗಣ್ಯರು ಬಂದಿದ್ದರು.
ಅದಲ್ಲದೇ, ಜ. 25 ರಂದು ಹರಿಪ್ರಿಯ ಮನೆಯಲ್ಲಿ ಅರಿಸಿಣ ಶಾಸ್ತ್ರವು ಅದ್ದೂರಿಯಾಗಿ ನಡೆಯಿತು. ಅರಿಶಿಣ ಶಾಸ್ತ್ರದ ಫೋಟೋಗಳನ್ನ ನಟಿ ಹರಿಪ್ರಿಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಒಟ್ಟಿನಲ್ಲಿ ಅಭಿಮಾನಿಗಳು ಚಂದನವನದ ಈ ಮುದ್ದಾದ ಜೋಡಿಗೆ ಶುಭಾಶಯ ತಿಳಿಸಿದ್ದು, ಮದುವೆಯ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿರುವುದನ್ನು ಕಾಣಬಹುದು.