ಮೊದಲು ನಾನು ತುಂಬಾ ಸ್ಲಿಮ್ ಆಗಿದ್ದೆ, ಮದುವೆ ಆದ ಮೇಲೆ ಇಷ್ಟೊಂದು ದಪ್ಪ ಆಗಿದ್ದು ಎಂದು ಹೇಳುವ ವಿವಾಹಿತೆ ಒಂದೆಡೆ ಹುಡುಗಿ ತೆಳ್ಳಗಿದ್ದರೆ, ಮದುವೆ ಆದ ಮೇಲೆ ದಪ್ಪ ಆಗ್ತಾಳೆ ಬಿಡಿ ಎಂದು ಹೇಳುವ ಸಂಬಂಧಿಕರು ಇನ್ನೊಂದೆಡೆ..ಇಂಥಾ ಮಾತುಗಳನ್ನು ನಾವೆಲ್ಲರೂ ಕೇಳಿರುತ್ತೇವೆ. ಮದುವೆ ಆದ ನಂತರ ಗಂಡಸರಿಗಿಂತ ಹೆಣ್ಣು ಮಕ್ಕಳು ಬೇಗನೆ ದಪ್ಪ ಆಗುತ್ತಾರೆ. ಮದುವೆ ಆಗುವುದಕ್ಕೂ ದೇಹದ ಭಾರ ಹೆಚ್ಚಾಗುವುದಕ್ಕೂ ಏನಾದರೂ ಸಂಬಂಧ ಇದೆಯಾ? ಇದಕ್ಕೇನು ಕಾರಣ ಎಂದು ಕೇಳಿದರೆ ಇಲ್ಲಿದೆ ಉತ್ತರ.
ವಿವಾಹದ ನಂತರ ನಮ್ಮ ಜೀವನ ಕ್ರಮಗಳಲ್ಲಿಯೂ ಬದಲಾವಣೆಯಾಗುತ್ತದೆ. ವಿವಾಹಕ್ಕಿಂತ ಮುಂಚೆ ನಮ್ಮ ದೇಹದ ಬಗ್ಗೆ ಹೆಚ್ಚಿನ ಗಮನವಹಿಸುತ್ತಿದ್ದವರು ವಿವಾಹದ ನಂತರ ಅದರತ್ತ ಹೆಚ್ಚಿನ ಗಮನ ಹರಿಸುವುದೇ ಇಲ್ಲ. ವಿವಾಹದ ನಂತರ ಗಂಡ ಮತ್ತು ಹೆಂಡತಿ ಒಟ್ಟಿಗೆ ಕುಳಿತು ಊಟ ಮಾಡುವಾಗ ಅದು ಪರಸ್ಪರ ಹೆಚ್ಚು ಆಹಾರ ಸೇವಿಸುವಂತೆ ಪ್ರೇರೇಪಿಸುತ್ತದೆ. ಪ್ರೀತಿಯಿಂದ ಊಟ ಮಾಡಿಸುವಾಗ ಹೆಚ್ಚು ಹೆಚ್ಚು ತಿನ್ನುವುದರಿಂದಲೇ ಮದುವೆ ಆದ ನಂತರ ದಂಪತಿಗಳು ದಪ್ಪ ಆಗುತ್ತಾರಂತೆ.
ಸ್ವಿಜರ್ ಲ್ಯಾಂಡಿನ ಬೆಸಲ್ ವಿಶ್ವವಿದ್ಯಾಲಯದ ಸೈಕಾಲಜಿ ಆರೋಗ್ಯ ವಿಭಾಗದ ಅಧ್ಯಯನ ತಂಡವೊಂದು ಅಧ್ಯಯನ ನಡೆಸಿ ತಯಾರಿಸಿದ ವರದಿಯಲ್ಲಿ ವಿವಾಹ ನಂತರ ದಪ್ಪ ಆಗುತ್ತಿರುವುದಕ್ಕೆ ಕಾರಣ ಹೇಳಲಾಗಿದೆ.
ಹೆಚ್ಚು ಹೆಚ್ಚು ಆಹಾರ ಸೇವಿಸುವುದು ಮಾತ್ರವಲ್ಲ, ವಿವಾಹಕ್ಕಿಂತ ಮುನ್ನ ಸರಿಯಾಗಿ ವ್ಯಾಯಾಮ ಮಾಡುತ್ತಿರುವವರು ನಂತರ ಅದನ್ನು ಕೈ ಬಿಟ್ಟು ಬಿಡುವುದು ಕೂಡಾ ತೂಕ ಹೆಚ್ಚಾಗಲು ಕಾರಣವಾಗುತ್ತದೆ.
ಮದುವೆಯಾಗಿ ಮಕ್ಕಳು ಹುಟ್ಟಿದ ಮೇಲೆ ಮಕ್ಕಳು ತಿಂದು ಉಳಿಸಿದ ಆಹಾರವನ್ನು ಸೇವಿಸುವುದರಿಂದಲೂ ಅಮ್ಮಂದಿರು ದಪ್ಪಗಾಗುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಹೌದು, ಗಂಡಸರಿಗೆ ಹೋಲಿಸಿದರೆ ಮದುವೆಯ ನಂತರ ಮಹಿಳೆಯರು ಬಹಳ ಬೇಗ ದಪ್ಪಗಾಗುತ್ತಾರೆ. ಬದಲಾದ ಜೀವನ ಕ್ರಮ ದೇಹ-ಮನಸ್ಸು ಎರಡರಲ್ಲೂ ತನ್ನ ಚಾಪು ಮೂಡಿಸುತ್ತದೆ. ನಿಜಕ್ಕೂ ಮದುವೆಗೂ ಊದಿಕೊಳ್ಳುವುದಕ್ಕೂ ಅದೆಲ್ಲಿಯ ಸಂಬಂಧ ಎಂದು ಉತ್ತರ ಮಾತ್ರ ಅಚ್ಚರಿ ತರುತ್ತದೆ.
ಮದುವೆ ಅಂದರೆ ಸಂತಸ ಅರಳುವ ಸಮಯ. ಅದೊಂದು ರೀತಿಯ ಹೊಸ ವಾತಾವರಣ ಸೃಷ್ಟಿಸುತ್ತದೆ. ಮನಸ್ಸು, ದೇಹ ರಿಲ್ಯಾಕ್ಸ್ ಆಗುವ ಹೊತ್ತು ಅದು. ಅಷ್ಟೆ ಅಲ್ಲ, ಒಂದಿಷ್ಟು ಸಮಯ ವೃತ್ತಿ ಸೇರಿದಂತೆ ಹಲವಾರು ಒತ್ತಡಗಳಿಂದ ದೂರ ಇರುವ ಸಮಯ ಅದು. ದೇಹ ದಂಡನೆಗೆ ಒಳಗಾಗುವುದಿಲ್ಲ. ನೆಂಟರಿಷ್ಟರ ಮನೆ ಅದು ಇದೂ ಅಂತ ತಿನ್ನುವ ಆಹಾರದಲ್ಲೂ ಲಿಮಿಟ್ ಇರುವುದಿಲ್ಲ.
ಗಂಡ ಹೆಂಡತಿ ಪ್ರೀತಿಯ ಮಾತುಗಳಾಡುತ್ತಾ, ಒಟ್ಟಿಗೆ ಕುಳಿತು ಊಟ ಮಾಡುವಾಗ ಹೊಟ್ಟೆಯ ಮೇಲೆ ಯಾವುದೇ ಹಿಡಿತ ಇರುವುದಿಲ್ಲ. ಏಕಾಂತವ ಹುಡುಕ ಹೊರಟು ಹೊರಗಿನ ತಿಂಡಿಗಳನ್ನು ತಿನ್ನುವುದು ಜಾಸ್ತಿಯಾಗುತ್ತದೆ. ಮದುವೆಯ ನಂತರ ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದನ್ನು ಕಡಿಮೆ ಮಾಡುತ್ತಾರೆ. ನನ್ನನ್ನು ಇನ್ಯಾರು ನೋಡುವ ಅವಶ್ಯಕತೆ ಇದೆ. ಅದಾಗಲೇ ಮೆಚ್ಚಿಕೊಳ್ಳಬೇಕಿದ್ದವರು ಮಚ್ಚಿದ್ದಾಗಿದೆ ಎಂದು ತಮ್ಮನ್ನು ತಾವೇ ಸಮಾಧಾನ ಮಾಡಿಕೊಳ್ಳುವುದು ಹೆಚ್ಚು.
ಸಮತೋಲನ ಕಾಯ್ದುಕೊಳ್ಳಿ
ಆದರೆ ದೇಹ ಹಾಗೂ ಮನಸ್ಸು ಉಲ್ಲಾಸದಿಂದ ಕೂಡಿರಬೇಕು ಅಂದರೆ ಕ್ರಮಬದ್ಧ ಆಹಾರ, ನಿಯಮಿತ ವ್ಯಾಯಾಮ ರೂಢಿಸಿಕೊಳ್ಳಲೇಬೇಕು. ಮದುವೆಯ ನಂತರ ಯಾರನ್ನೂ ಆಕರ್ಷಿಸಬೇಕಿಲ್ಲ ಎಂದುಕೊಳ್ಳಬೇಡಿ. ನಿಮ್ಮ ಸಂಗಾತಿ ದೀರ್ಘಕಾಲ ನಿಮ್ಮತ್ತ ಆಕರ್ಷಣೆ ಉಳಿಸಿಕೊಳ್ಳಬೇಕು ಅಂದರೆ ಮದುವೆ ಮುಂಚಿನ ನಿಮ್ಮ ದೇಹ ಸೌಂದರ‌್ಯಕ್ಕೆ ಕೊಟ್ಟ ಗಮನವನ್ನು ಈಗಲೂ ಕೊಡಬೇಕು.
ಮದುವೆ ನಂತರವೂ ಏರುವ ತೂಕವನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದು. ಸಂಗಾತಿಯ ಜತೆಗೆ ಜಾಗಿಂಗ್, ವಾಕಿಂಗ್ ಜತೆ ಕಪಲ್ ಸ್ಪಾ ಥೆರಪಿಗಳನ್ನು ಪಡೆಯಬಹುದು.