ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಗೂ ಮುನ್ನ ಪ್ರಚಾರ ಸಭೆಗಳಲ್ಲಿ ಮಾತನಾಡಿದ ಮಾದರಿಯಂತೆ ಉಚಿತ ವಿದ್ಯುತ್ ಬಗ್ಗೆ ತಾಲೂಕಿನ ಕೆರಗೋಡು ಗ್ರಾಮದ ವ್ಯಕ್ತಿಯೊಬ್ಬರು ಮಾಡಿರುವ ಟಿಕ್‌ಟಾಕ್ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ.
ಇದರಿಂದ ವಿದ್ಯುತ್ ಬಿಲ್ ವಸೂಲಿಗೆ ಹೋದ ಸೆಸ್ಕ್ ಸಿಬ್ಬಂದಿ ಸಿದ್ದರಾಮಯ್ಯ ರೀತಿ ಡೈಲಾಗ್ ಹೊಡೆಯುವ ವ್ಯಕ್ತಿಯನ್ನು ಕಂಡು ಪೇಚಿಗೆ ಸಿಲುಕಿದ್ದಾರೆ. ಕರಂಟ್ ಬಿಲ್ ಕಟ್ಟಣ್ಣ ಎಂದು ಸೆಸ್ಕಾಂ ಸಿಬ್ಬಂದಿ ಕೇಳಿದರೆ, ಕರಂಟ್ ಬಿಲ್ ಕೇಳಿದರೆ ನಿಮ್ಮನ್ನೇ ಕಟ್ಟಿ ಹಾಕುತ್ತೇನೆ ಎಂದು ವ್ಯಕ್ತಿ ಬೆದರಿಕೆ ಹಾಕಿದ ಘಟನೆಯೂ ನಡೆದಿದೆ
ಹಾಗೆಯೆ ಕರಂಟ್ ಬಿಲ್ ಕಟ್ಟುವಂತೆ ಗ್ರಾಮದಲ್ಲಿ ಸೆಸ್ಕ್ ಸಿಬ್ಬಂದಿ ಹೋದರೆ, ಟಿಕ್‌ಟಾಕ್ ಮಾಡಿರುವ ವೀಡಿಯೋವನ್ನು ಗ್ರಾಮಸ್ಥರು ತೋರಿಸಿ ನಾವೂ ಬಿಲ್ ಕಟ್ಟಲ್ಲ ಎಂದು ಸಿಬ್ಬಂದಿಯನ್ನೇ ತರಾಟೆಗೆ ತೆಗೆದುಕೊಂಡು ವಾಪಸ್ಸು ಕಳುಹಿಸುತ್ತಿರುವ ಘಟನೆಗಳೂ ಹಲವೆಡೆ ನಡೆದಿರುವ ಉದಾಹರಣೆಗಳು ಇವೆ. ಕರೆಂಟ್ ಬಿಲ್ ಕಟ್ಟಬೇಡಿ ಹಾಗೆಯೆ ಜನತೆ ಕಾಂಗ್ರೆಸ್‌ನ ಆಶ್ವಾಸನೆಯನ್ನು ನಂಬಿ ಮತ ಹಾಕಿದ್ದಾರೆ. ಆದರೆ ಕಾಂಗ್ರೆಸ್ ರಾಜ್ಯದಲ್ಲಿ ಗೆದ್ದು ಇಂದಿಗೆ 20 ದಿನ ಕಳೆದರೂ ಯಾವುದೇ ಯೋಜನೆಗಳ ಬಗ್ಗೆ ಮಾತುಗಳಿಲ್ಲ. ಕರೆಂಟ್ ಬಿಲ್ ನೀಡಲು ಬರುವ ಸಿಬ್ಬಂದಿ ಮೇಲೆ ಹಲ್ಲೆಗಳಾಗುತ್ತಿದೆ. ರಾಜ್ಯದ ಜನತೆ ಸರಿ ಇದ್ದಾರೆ. ಹಾಗಾಗಿ ಬಿಲ್ ಕಟ್ಟಬಾರದೆಂದು ನಾನು ಕರೆ ಕೊಡುತ್ತೇನೆ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಚುನಾವಣೆ ಪೂರ್ವದಲ್ಲಿ ಐದು ಉಚಿತ ಭರವಸೆ ನೀಡುತ್ತೇವೆ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸರ್ಕಾರ ಬಂದ 24 ಗಂಟೆಯಲ್ಲಿ ಗ್ಯಾರಂಟಿ ಭರವಸೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಅಂದಿದ್ದರು. ಸುಳ್ಳು ಆಶ್ವಾಸನೆ ಕೊಟ್ಟು ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೇರಿದೆ. ಯಾವುದೇ ಮಾನದಂಡಗಳಿಲ್ಲದೆ ಭಾಗ್ಯಗಳು ಸಿಗುತ್ತದೆಂದು ಹೇಳಿದ್ದರು. ಆದರೆ ಗ್ಯಾರಂಟಿ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ.
ಎಲ್ಲಾದರೂ ಜನರಿಗೆ ತೊಂದರೆಯಾದಲ್ಲಿ ನಾವು ಸಮ್ಮುನಿರುವುದಿಲ್ಲ ಎಂದು ಹೇಳಿದರು. ಆರ್.ಎಸ್.ಎಸ್ ನಿಷೇಧದ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್, ನೆಹರೂ, ಇಂದಿರಾ ಗಾಂಧಿ ಎಲ್ಲರೂ ನಿಷೇಧಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡಿದಾರೆ. ಯಾವಾಗೆಲ್ಲಾ ಕಾಂಗ್ರೆಸ್ ಸರ್ಕಾರ ಇತ್ತೋ ಆಗೆಲ್ಲಾ ಇದಾಗಿದೆ ಎಂದು ವಾಗ್ದಾಳಿ ನಡೆಸಿದರು. ಹಾಗೆಯೆ ನಿಷೇಧದ ಕೆಲಸ ಮಾಡಿದಾಗಲೆಲ್ಲಾ ದೇಶದಲ್ಲಿ ಕಾಂಗ್ರೆಸ್ ಸರ್ಕಾರವೇ ಬಂದಿಲ್ಲ. ಸಿದ್ದರಾಮಯ್ಯ ಬಜರಂಗದಳ, ಆರ್.ಎಸ್.ಎಸ್ ನಿಷೇಧಕ್ಕೆ ಕೈ ಹಾಕಿದರೆ ಅವರ ರಾಜಕೀಯ ಮುಗಿಯುತ್ತದೆ. ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆಗೆ ತಾಕತ್ ಇದ್ದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ಬಂಧಿಸಲಿ ಎಂದು ಸವಾಲೆಸಿದರು.
ಇವತ್ತು ಕಾಂಗ್ರೆಸ್‌ನ ರಾಜನೀತಿಯಿಂದ ರಾಜ್ಯದಲ್ಲಿ ಅರಾಜಕತೆ ಪ್ರಾರಂಭವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಪ್ರಾರಂಭ ಮಾಡಿದೆ. ಅಶ್ವತ್ಥ್ ನಾರಾಯಣ್ ಯಾವುದೋ ಸಂದರ್ಭದಲ್ಲಿ ತಪ್ಪಾಗಿ ಮಾತನಾಡಿದ್ದಾರೆ. ಅದಕ್ಕೆ ಕ್ಷಮೆ ಕೂಡ ಕೇಳಿದ್ದಾರೆ. ಈಗ ಅವರ ಮೇಲೆ ಎಫ್ಐಆರ್ ಹಾಕಿದ್ದಾರೆ. ಹಾಗೆಯೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆ ಇಟ್ಟುಕೊಂಡು ಕೇಸ್ ಮಾಡಿದ್ದಾರೆ. ಬಂಟ್ವಾಳದ ಮಾಣಿಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಆದರೆ ಹಲ್ಲೆ ಮಾಡಿದವರ ಬದಲು ಹಲ್ಲೆಗೊಳಗಾದವರ ಮೇಲೆ ಕೇಸ್ ಹಾಕಿದ್ದಾರೆಂದು ಗುಡುಗಿದರು.