ಬಾಂಗ್ಲಾದೇಶದ ರಾಷ್ಟ್ರೀಯ ದೇಹದಾರ್ಢ್ಯ ಚಾಂಪಿಯನ್‌ಶಿಪ್ ಸ್ಪರ್ಧೆ ನಡೆದ ಸಂದರ್ಭದಲ್ಲಿ ಅಲ್ಲೊಂದು ವಿಲಕ್ಷಣ ಘಟನೆ ನಡೆದು ಸುದ್ದಿಯಾಗಿದೆ. ಈ ವಿಚಿತ್ರ ಘಟನೆಯಲ್ಲಿ, ದೇಹದಾರ್ಢ್ಯ ಸ್ಪರ್ಧೆಯಲ್ಲಿ 2ನೇ ಸ್ಥಾನವನ್ನು ಪಡೆದ ಜಾಹಿದ್ ಹಸನ್ ಶುವೊ ಅವರು ಬಹುಮಾನವನ್ನು ಸ್ವೀಕರಿಸಿದ ನಂತರ ಅದನ್ನು ಒದ್ದಿದ್ದಾರೆ… ವರದಿಯ ಪ್ರಕಾರ, ಶುವೋ ಅವರು ಬಹುಮಾನವಾಗಿ “ಬ್ಲೆಂಡರ್” ಅನ್ನು ಪಡೆದರು, ಅದು ಅವರಿಗೆ ಖುಷಿಯನ್ನು ನೀಡಲಿಲ್ಲ.
ಅಲ್ಲದೇ ಬಹುಮಾನ ಕೊಟ್ಟ ಮೇಲೆ ಸ್ಟೇಜ್ ಮೇಲೆ ಇದ್ದ ಗಣ್ಯರು ಅವರನ್ನು ಬದಿಗೆ ಸರಿಯಲು ಒರಟಾಗಿ ಹೇಳಿ ಅವಮಾನಿಸಿದರು. ಅದರಿಂದ ಕೋಪಗೊಂಡ ಅವರು ಹತಾಶೆಯಿಂದ ಬಹುಮಾನದ ಪೆಟ್ಟಿಗೆಯನ್ನು ಒದೆಯಲು ಪ್ರಾರಂಭಿಸಿದರು, ಅನಂತರ ಅವರು ಬಾಂಗ್ಲಾದೇಶ ದೇಹದಾರ್ಢ್ಯ ಒಕ್ಕೂಟವನ್ನು ಕೂಡ ಬೈದು ಖಂಡಿಸಿದ್ದಾರೆ.
ಅವರು ಈ ರೀತಿ ಏಕೆ ವರ್ತಿಸಿದರು ಎಂದು ಕೇಳಿದಾಗ, ಅದಕ್ಕೆ ಉತ್ತರ ನೀಡಿದ ಶುವೋ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಫೆಡರೇಶನ್ ಜೊತೆಗಿನ ಅವರ ಅಸಮಾಧಾನಕ್ಕೆ ಅವರು ತಮ್ಮ ಫಡೆರೇಶನ್ ಜೊತೆಗೆ ತಾನು ಸಮ್ಮತಿ ಹೊಂದಿಲ್ಲದೇ ಇರುವುದೇ ಕಾರಣವೆಂದು ಹೇಳಿದ್ದಾರೆ. ನೆಟ್ಟಿಗರಲ್ಲಿ ಕೆಲವರು ಅವರ ಕೋಪವನ್ನು ಟೀಕೆ ಮಾಡಿದ್ದರೆ, ಮತ್ತೆ ಕೆಲವರು ಅವಮಾನ ಮಾಡಿದ್ದಕ್ಕೆ ಅವರು ವರ್ತಿಸಿರುವುದು ಸರಿ ಇದೆ ಎಂದಿದ್ದಾರೆ.
ಅವರಿಗೆ ಸ್ವಯಂ ನಿಯಂತ್ರಣದ ಕೊರತೆಯಿದೆ ಎಂದು ಕೆಲವರು ಹೇಳಿದ್ದಾರೆ. ಆದರೆ ಇದೇ ವೇಳೆ ಒಂದಷ್ಟು ಜನರು ಭ್ರಷ್ಟಾಚಾರದ ವಿರುದ್ಧ ಅವರು ಮಾತನಾಡಿದ್ದಾರೆ ಎಂದು ಅವರನ್ನು ಬೆಂಬಲಿಸಿದ್ದಾರೆ. 28 ವರ್ಷ ವಯಸ್ಸಿನ ಬಾಡಿ ಬಿಲ್ಡರ್ ಜಾಹಿದ್ ಹಸನ್ ಶುವೊ ಅವರು 2022 ರ BBF ರಾಷ್ಟ್ರೀಯ ದೇಹದಾರ್ಢ್ಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದರು
ಪುರುಷರ ಫಿಸಿಕ್ 170 ಸೆಂ ಪ್ಲಸ್ ವಿಭಾಗದಲ್ಲಿ ಸ್ಪರ್ಧಿಸಿ ಅವರು ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಸ್ಪರ್ಧೆಯ ನಂತರ ಅವರು “ನನ್ನ ಮತ್ತು ವಿಜೇತರ ನಡುವಿನ ದೈಹಿಕ ವ್ಯತ್ಯಾಸವನ್ನು ಒಂದು ಮಗು ಕೂಡಾ ಹೇಳಿ ಬಿಡುತ್ತದೆ” ಎಂದು ಅವರು ಹೇಳಿದ್ದು, ಅವರು ಸ್ಪರ್ಧೆಯ ಫಲಿತಾಂಶದಿಂದ ತೃಪ್ತರಾಗಿರಲಿಲ್ಲ ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಗಿದೆ.
2020 ರಿಂದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಅವರು ಸತತ ಎರಡು ವರ್ಷಗಳ ಪ್ರಶಸ್ತಿಯನ್ನು ಗೆದ್ದು ಬೀಗಿದ್ದರು. ಆದರೆ ಈ ವರ್ಷ ಫೆಡರೇಶನ್ ನ ಪಕ್ಷಪಾತದ ನಿರ್ಧಾರವನ್ನು ನೀಡಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ. ಅವರು ಫೆಡರೇಶನ್ ನ ಇಂತಹ ನಡವಳಿಕೆಯ ಬಗ್ಗೆ ಮಾದ್ಯಮಗಳ ಮುಂದೆ ಮಾತನಾಡುತ್ತಾ, ಅವರು “ಇದು ಭ್ರಷ್ಟಾಚಾರದ ಕಿಕ್, ನಮ್ಮ ದೇಶದ ಯಾವುದೇ ಸ್ಥಳದಲ್ಲಿ, ಯಾವುದೇ ರೀತಿಯ ಭ್ರಷ್ಟಾಚಾರ ಬೇಕಾದರೂ ನಡೆಯಬಹುದು” ಎಂದು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಬಹುಮಾನವಾಗಿ “ಬ್ಲೆಂಡರ್” ಒಂದನ್ನು ಪಡೆಯುವುದು ಖಂಡಿತ ವಿಲಕ್ಷಣವಲ್ಲ ಎನ್ನಬಹುದು. ಈ ಹಿಂದೆ ಅಂದರೆ 2013 ರಲ್ಲಿ ಕ್ರಿಕೆಟಿಗ ಲ್ಯೂಕ್ ರೈಟ್ ಅವರಿಗೆ ಡಿಪಿಎಲ್ (ಢಾಕಾ ಪ್ರೀಮಿಯರ್ ಲೀಗ್) ನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಆಗಿದ್ದಕ್ಕಾಗಿ ಇದೇ ರೀತಿಯ ಬಹುಮಾನವನ್ನು ನೀಡಲಾಗಿತ್ತು.
ಶುವೋ ಅವರ ಆರೋಪಕ್ಕೆ ಸಮರ್ಥನೆ ನೀಡುತ್ತಾ ಫೆಡರೇಶನ್, ಪ್ರಾಯೋಜಕರು ಗೆಲುವಿನ ಸಂಕೇತವಾಗಿ “ಬ್ಲೆಂಡರ್” ಅನ್ನು ನೀಡಿದ್ದರು. ಇತರೆ ಬಹುಮಾನಗಳು ಇನ್ನೂ ಬರುವುದರಲ್ಲಿತ್ತು. ಆದರೆ ದುರಾದೃಷ್ಟವಶಾತ್, ರನ್ನರ್-ಅಪ್ ಆದ ಸ್ಪರ್ಧಿಯು ಬಹುಮಾನಗಳು ಬರುವ ಮೊದಲೇ ಪ್ರತಿಭಟನೆ ಪ್ರಾರಂಭಿಸಿದರು ಎಂದು ಹೇಳಿದೆ.
ಇನ್ನು ಈ ಎಲ್ಲಾ ವಿದ್ಯಮಾನಗಳು ಶುವೊ ಮೇಲೆ ಜೀವಮಾನದ ನಿಷೇಧ ಹೇರುವುದರೊಂದಿಗೆ ಅಂತ್ಯ ಕಂಡಿದೆ. ಇನ್ನು ಶುವೋ ಅವರು ತಾನು ನೀಡಿದ ಪ್ರತಿಕ್ರಿಯೆಗಾಗಿ ತಪ್ಪೊಪ್ಪಿಕೊಂಡಿದ್ದು ಮಾತ್ರವೇ ಅಲ್ಲದೇ ಅವರು ಕ್ಷಮೆಯಾಚಿಸಿದ್ದಾರೆ. ತಾನು ಆ ರೀತಿ ಮಾಡಿದ್ದು ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸುವುದಕ್ಕಾಗಿಯೇ ಹೊರತು ಒಕ್ಕೂಟದ ಬಗೆಗಿನ ಅಗೌರವದಿಂದ ಅಲ್ಲ ಎನ್ನುವ ಮಾತನ್ನು ಅವರು ಹೇಳಿದ್ದಾರೆ.
ಜಾಹಿದ್ ಹಸನ್ ಶುವೋ ಪ್ರಕರಣವು ಅತೃಪ್ತಿಗೆ ನಿದರ್ಶನವಾಗಿದೆ. ಈಗ ಅವರ ಮೇಲೆ ವಿಧಿಸಲಾಗಿರುವ ಜೀವಿತಾವಧಿಯ ನಿಷೇಧವು ಅವರ ವೃತ್ತಿಜೀವನಕ್ಕೆ ಕೊನೆ ಹಾಡಲಿದೆಯೋ ಅಥವಾ ಅದನ್ನು ತೆರೆವುಗೊಳಿಸಲಾಗುವುದೋ ಕಾದು ನೋಡಬೇಕಾಗಿದೆ.
ಅವರು ವರ್ತಿಸಿರುವ ವಿಡಿಯೊ ಕೆಳಗಿದೆ ನೋಡಿ…