ಸ್ಯಾಂಡಲ್ವುಡ್ ನಟ ರೆಬೆಲ್ ಸ್ಟಾರ್ ಅಂಬರೀಶ್ ಸುಪುತ್ರ ಅಭಿಷೇಕ್ ಅಂಬರೀಶ್ ವಿವಾಹ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದೆ. ಅರಿಶಿನ ಶಾಸ್ತ್ರದ ಸಂಭ್ರಮದಲ್ಲಿರುವ ನಟ ಅಭಿಷೇಕ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮಂಡ್ಯದ ಮರಿ ಗೌಡ ಅಭಿಷೇಕ್ ಅಂಬರೀಶ್, ಫ್ಯಾಷನ್ ಡಿಸೈನರ್ ಅವಿವಾ ಬಿದ್ದಪ್ಪ ಜೋಡಿ ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸಿ, ಇದೀಗ ಮದುವೆ ಎಂಬ ಮುದ್ರೆ ಒತ್ತಲು ರೆಡಿಯಾಗಿದ್ದಾರೆ.
ಜೂನ್ 5ರಂದು ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ಜರುಗಲಿದೆ. ಜೂನ್ 7ರಂದು ಭರ್ಜರಿಯಾಗಿ ಆರತಕ್ಷತೆ ಸಮಾರಂಭ ನಡೆಯಲಿದೆ.ಈಗಾಗಲೇ ಮದುವೆ ಶಾಶ್ತ್ರಗಳು ನಡೆಯುತ್ತಿವೆ. ಬಿಳಿ ಬಣ್ಣದ ಉಡುಗೆಯಲ್ಲಿ ಅಭಿಷೇಕ್ ಅರಿಶಿನ ಶಾಸ್ತ್ರದಲ್ಲಿ ಮಿಂಚಿದ್ದಾರೆ. ಮನೆ ಕೂಡ ಅದ್ದೂರಿಯಾಗಿ ಅಲಂಕರಿಸಲಾಗಿದೆ. ಅಭಿಷೇಕ್ ಅಂಬರೀಶ್ ಜೊತೆ ಅವಿವಾ ಡಿಸೆಂಬರ್ 11ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರಿಬ್ಬರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಈಗ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಮದುವೆ ಆಮಂತ್ರಣ ಪತ್ರಿಕೆಯನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಹಲವು ಗಣ್ಯರಿಗೆ ಇದೇ ವಿವಾಹ ಪತ್ರಿಕೆಯನ್ನು ಸುಮಲತಾ ಹಾಗೂ ಅಭಿಷೇಕ್ ತಲುಪಿಸಿದ್ದಾರೆ. ಇನ್ನು ಅಭಿಷೇಕ ಅಂಬರೀಶ್ ತಂದೆಯ ನೆನಪಲ್ಲೆ ಅವರ ಮೇಣದ ಪ್ರತಿಕೃತಿ ಮಾಡಿಸುತ್ತಿದ್ದಾರೆ ಎಂಬ ಗಾಳಿ ಸುದ್ದಿ ಹರಡಿದೆ.
ಇದೀಗ ಜೂನ್ 5ರಂದು ಮಾಣಿಕ್ಯ ಚಾಮರ ವಜ್ರದಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದೆ. 9:30ರಿಂದ 10:30ರ ನಡುವೆ ಸಲ್ಲುವ ಕರ್ಕಾಟಕ ಶುಭ ಲಗ್ನದ ಮುಹೂರ್ತದಲ್ಲಿ ಅವಿವಾಗೆ ಅಭಿಷೇಕ್ ಮಾಂಗಲ್ಯಧಾರಣೆ ಮಾಡಲಿದ್ದಾರೆ. ಇದಾದ ಬಳಿಕ ಜೂನ್ 7ರಂದು ಪ್ಯಾಲೇಸ್ ಮೈದಾನದ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಅದ್ದೂರಿ ಆರತಕ್ಷತೆ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟದ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಆ ಕ್ಷಣದಲ್ಲಿ ಅಂಬರೀಶ್ ಅವರ ನೆನಪು ಕಾಡದಿರದು.