ಕಾಂತಾರ ಸಿನಿಮಾವನ್ನು ಹಿಂದಿ ಮತ್ತು ತೆಲುಗು ಪ್ರೇಕ್ಷಕರು ಮುಗಿಬಿದ್ದು ನೋಡಿದ್ದಾರೆ. ರಿಷಬ್ ಶೆಟ್ಟಿಯ ನಟನೆ, ನಿರ್ದೇಶನದ ಈ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿರುವುದು ರಾಜಮೌಳಿ ಅವರಿಗೆ ಅಚ್ಚರಿ ಮೂಡಿಸಿದೆ. ಅವರ ಅಚ್ಚರಿಗೆ ಕಾರಣ ಆಗಿರುವುದು ಚಿತ್ರದ ಬಜೆಟ್.
ರಾಜಮೌಳಿ ಅವರ ಸಿನಿಮಾಗಳೆಲ್ಲವೂ ನೂರಾರು ಕೋಟಿ ರೂಪಾಯಿ ಬಜೆಟ್’ನಲ್ಲಿ ಸಿದ್ಧವಾಗುತ್ತವೆ. ಆದರೆ ‘ಕಾಂತಾರ’ ತಯಾರಾಗಿದ್ದು ಸಣ್ಣ ಬಜೆಟ್’ನಲ್ಲಿ. ಈ ಚಿತ್ರ 400 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿರುವುದರ ಬಗ್ಗೆ ರಾಜಮೌಳಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಂಟೆಂಟ್ ಮುಖ್ಯ, ಬಜೆಟ್ ಅಲ್ಲ ಎಂದಿದ್ದಾರೆ.
ದೈವವನ್ನು ನಂಬುವ ರಿಷಬ್ ಶೆಟ್ಟಿ, ದೈವದ ಬಗ್ಗೆ ಸಿನಿಮಾ ಮಾಡುವಾದ ನೇಮ, ನಿಷ್ಠೆಗಳಿಂದ ಮಾಡಿದ್ದು, ಅಪಚಾರವಾಗದಂತೆ ನಡೆದುಕೊಂಡಿದ್ದರಿಂದಲೇ ದೈವದ ಆಶೀರ್ವಾದ ಸಿನಿಮಾಕ್ಕೆ ಧಕ್ಕಿ, ದೊಡ್ಡ ಹಿಟ್ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೀಗ ‘ಕಾಂತಾರ 2’ ಸಿನಿಮಾದ ಮಾತುಕತೆ ಶುರುವಾಗಿದ್ದು, ‘ಕಾಂತಾರ 2′ ಸಿನಿಮಾ ಮಾಡಬಹುದೇ ಎಂದು ಸ್ವತಃ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಚಿತ್ರತಂಡದವರು ದೈವದ ಅನುಮತಿಯನ್ನು ಕೇಳಿದ್ದಾರೆ. ಈ ಸಂದರ್ಭದಲ್ಲಿ ದೈವವು ಕೆಲವು ಎಚ್ಚರಿಕೆಗಳನ್ನು ಚಿತ್ರತಂಡಕ್ಕೆ ನೀಡಿದೆ.
ಮಂಗಳೂರು ನಗರ ಹೊರವಲಯದ ಬಂದಲೆಯ ಮನೆಯಲ್ಲಿ ನಡೆದ ಪಂಜುರ್ಲಿ ಕೋಲದಲ್ಲಿ ಕಾಂತಾರ ಚಿತ್ರತಂಡ ಭಾಗವಹಿಸಿದೆ. ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ಸಮ್ಮುಖದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ದೈವದ ಬಳಿ ರಿಷಬ್ ಶೆಟ್ಟಿ ದೈವದ ಬಳಿ ಕಾಂತಾರಾ ಭಾಗ ಎರಡು ನಿರ್ಮಾಣಕ್ಕೆ ಅನುಮತಿ ಕೇಳಿದೆ. ಈ ಸಂದರ್ಭದಲ್ಲಿ ಸಿನಿಮಾದ ನಿರ್ದೇಶಕ, ನಟ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಸೇರಿದಂತೆ ಇನ್ನು ಕೆಲವರು ಹಾಜರಿದ್ದರು.
ಕಾಂತಾರ’ ಭಾಗ 2 ಸಿನಿಮಾ ಮಾಡಲು ದೈವವು ಅನುಮತಿಯನ್ನು ನೀಡಿದೆ. ಆದರೆ ಕೆಲವು ಷರತ್ತುಗಳನ್ನು, ಎಚ್ಚರಿಕೆಯನ್ನು ದೈವ ನೀಡಿದೆ. ‘ಕಾಂತಾರ’ ಚಿತ್ರತಂಡಕ್ಕೆ ಅಭಯ ನೀಡಿರುವ ಅಣ್ಣಪ್ಪ ಪಂಜುರ್ಲಿ ‘ಮೊದಲು ಚಿತ್ರ ಮಾಡೋವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ, ಈ ಬಾರಿ ಮಾತ್ರ ನೂರು ಬಾರಿ ಯೋಚನೆ ಮಾಡಿ. ಮಾಡಿದ ಪ್ರಯತ್ನಕ್ಕೆ ಯಾವತ್ತೂ ಜಯ ಸಿಗುವ ರೀತಿ ಮಾಡುತ್ತೇನೆ. ಈ ಹಿಂದೆ ಇದ್ದ ತಂಡದ ಜೊತೆಗೆ, ಅಷ್ಟೇ ಶುದ್ಧಾಚಾರದಲ್ಲಿ ಮುಂದುವರಿಯಿರಿ’ ಅಂತಾ ದೈವ ಅಣ್ಣಪ್ಪ ಪಂಜುರ್ಲಿ ಕಾಂತಾರ ಚಿತ್ರತಂಡಕ್ಕೆ ಅಭಯ ನೀಡಿದೆ.
ದೈವದಿಂದ ಅನುಮತಿ ದೊರೆತೊಡನೆ ರಿಷಬ್ ಶೆಟ್ಟಿ ಸಿನಿಮಾ ನಿರ್ಮಾಣಕ್ಕೆ ಈಗಾಗಲೇ ಮಾಡಿಕೊಂಡಿದ್ದ ಯೋಜನೆಯನ್ನು ಜಾರಿಗೊಳಿಸಲು ಪ್ರಾರಂಭಿಸಿದ್ದಾರೆ. ಚಿತ್ರದಲ್ಲಿ ನಟಿಸುವ ಕೆಲವರಿಗೆ ಉದ್ದ ಕೂದಲು ಬಿಡಲು ಸೂಚಿಸಿದ್ದಾರೆ. ಮುಂದಿನ ಮಳೆಗಾಲದ ಅವಧಿಯಲ್ಲಿ ಕಾಂತಾರಾ ಭಾಗ ಎರಡು ಚಿತ್ರದ ಚಿತ್ರೀಕರಣ ವಾಗುವ ಸಾಧ್ಯತೆಗಳಿವೆ. ‘ಕಾಂತಾರ’ ಸಿನಿಮಾದಲ್ಲಿ ನಟಿಸಿರುವ ಬಹುತೇಕ ಕಲಾವಿದರು ‘ಕಾಂತಾರ 2’ ಸಿನಿಮಾದಲ್ಲಿಯೂ ನಟಿಸುವ ಸಾಧ್ಯತೆ ದಟ್ಟವಾಗಿದೆ. ಮತ್ತು ಈ ಕತೆ ‘ಕಾಂತಾರ’ ಮೊದಲ ಭಾಗ ನಡೆದ ಕತೆಗಿಂತಲೂ ಹಿಂದಿನ ಸಮಯದ ಕತೆ ಹೊಂದಿರಲಿದೆ ಎನ್ನಲಾಗುತ್ತಿದೆ.